ADVERTISEMENT

ತೆರಿಗೆ ವಿನಾಯಿತಿ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 14:14 IST
Last Updated 24 ಆಗಸ್ಟ್ 2019, 14:14 IST

ಚಿಕ್ಕಬಳ್ಳಾಪುರ: ‘ಸಹಕಾರ ಸಂಘಗಳ ಸೌಹಾರ್ದ ಕಾಯ್ದೆ 1997ಕ್ಕೆ ತಿದ್ದುಪಡಿಗಳನ್ನು ತಂದು ತೆರಿಗೆಗಳಿಗೆ ವಿನಾಯಿತಿ ನೀಡಬೇಕು’ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಚ್‌.ಕೃಷ್ಣಾರೆಡ್ಡಿ ತಿಳಿಸಿದರು.


ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಹಕಾರ ಸಂಸ್ಥೆಗಳಿಗೆ 80ಪಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟೀಸ್ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಗೊಂದಲವನ್ನು ನಿವಾರಿಸಬೇಕು’ ಎಂದರು.


‘ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿ ಬಳಿಕ ಹಲವು ಬಾರಿ ತಿದ್ದುಪಡಿಗಳು ಆಗಿವೆ. ಸಂಯುಕ್ತ ಸಹಕಾರಿ ಮತ್ತು ಸೌಹಾರ್ದ ಸಹಕಾರಿ ಕ್ಷೇತ್ರದ ಮೂಲ ಆಶಯಕ್ಕೆ ಧಕ್ಕೆ ಬರುವ ಹಾಗೆ ತಿದ್ದುಪಡಿಗಳಾಗಿವೆ. ಇದರಿಂದ ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ತೊಂದರೆ ಉಂಟಾಗುತ್ತಿದೆ. ಅದನ್ನು ನಿವಾರಿಸಿ, ಸೌಹಾರ್ದ ಸಹಕಾರಿ ಕಾಯ್ದೆಯ ಮೂಲ ಆಶಯ ಪುನರ್‌ ಸ್ಥಾಪನೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT


‘ಖಾಸಗಿ ಲೆಕ್ಕಪರಿಶೋಧಕರಿಂದ ಸಂಘಗಳ ಲೆಕ್ಕ ಪರಿಶೋಧನೆ ಮಾಡಿಸಲು ಮೂಲ ಕಾಯ್ದೆಯಲ್ಲಿ ಅವಕಾಶವಿತ್ತು. ಆದರೆ ಅದಕ್ಕೆ ತಿದ್ದುಪಡಿ ತಂದು ಸಹಕಾರ ಇಲಾಖೆ ಲೆಕ್ಕಪರಿಶೋಧಕರಿಂದಲೇ ಆ ಕೆಲಸ ಮಾಡಿಸಬೇಕು ಎಂದು ಹೊಸ ನಿಯಮ ಸೇರಿಸಲಾಗಿದೆ. ಅದಕ್ಕೆ ಸಹಕಾರ ಇಲಾಖೆ ನಿಗದಿಪಡಿಸಿರುವುದು ಅಸಮಂಜಸವಾಗಿದೆ’ ಎಂದು ಆಕ್ಷೇಪಿಸಿದರು.


‘ಸಹಕಾರಿಯ 18ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆ.18 ರಂದು ಬೆಂಗಳೂರಿನ ವಿಜಯನಗರದಲ್ಲಿ ಆಯೋಜಿಸಲಾಗಿದೆ. ಈ ಸಭೆಗೆ ರಾಜ್ಯದ 4,700 ಸೌಹಾರ್ದ ಸಹಕಾರಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನೆರೆ ಪರಿಹಾರಕ್ಕಾಗಿ ಸಹಕಾರಿಗಳಿಂದ ಈಗಾಗಲೇ ₹10 ಲಕ್ಷ ಸಂಗ್ರಹಿಸಿದ್ದೇವೆ. ಈ ತಿಂಗಳ ಅಂತ್ಯದವರೆಗೂ ಸಂಗ್ರಹವಾಗುವ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುತ್ತದೆ’ ಎಂದರು.


ಸೌಹಾರ್ದ ಸಂಯುಕ್ತ ಸಹಕಾರ ಸಂಘದ ಬೆಂಗಳೂರು ಪ್ರಾಂತೀಯ ಅಧಿಕಾರಿ ನಾರಾಯಣ ಹೆಗಡೆ, ಜಿಲ್ಲಾ ಘಟಕದ ಸಂಯೋಜಕ ಉಮೇಶ್, ಮುಖಂಡರಾದ ಗೌರಿಬಿದನೂರಿನ ನಾಗೇಂದ್ರ ಗುಪ್ತಾ, ಚಿಕ್ಕಬಳ್ಳಾಪುರ ತ್ಯಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.