ADVERTISEMENT

ಸಿಪಿಎಂಗೆ 1,225 ಸದಸ್ಯರ ರಾಜೀನಾಮೆ ಸಲ್ಲಿಕೆ

ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳದ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 14:40 IST
Last Updated 18 ಜೂನ್ 2020, 14:40 IST

ಚಿಕ್ಕಬಳ್ಳಾಪುರ: ‘ಸಿಪಿಎಂ ಪಕ್ಷದಲ್ಲಿನ ಕೆಲ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಗ್ಗೆ ಪಕ್ಷದ ರಾಜ್ಯ ಮತ್ತು ಕೇಂದ್ರ ಸಮಿತಿಗೆ ದೂರು ನೀಡಿದರೂ ಈವರೆಗೆ ಯಾರೊಬ್ಬರ ವಿರುದ್ಧ ಕ್ರಮಜರುಗಿಸಿಲ್ಲ. ಆದ್ದರಿಂದ, ಜಿಲ್ಲೆಯಲ್ಲಿ 1,225 ಸಿಪಿಎಂ ಸದಸ್ಯರು ಪಕ್ಷಕ್ಕೆ ಸಲ್ಲಿಸಿದ್ದೇವೆ’ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಚನ್ನರಾಯಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲ ಸದಸ್ಯರು ಸಿಪಿಎಂ ಸೋಲಿಸಲು ಕಾಂಗ್ರೆಸ್ ಜತೆಗೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಬೇಸತ್ತು ಸದ್ಯಸರು ರಾಜೀನಾಮೆ ನಿರ್ಧಾರಕ್ಕೆ ಬಂದರು’ ಎಂದು ತಿಳಿಸಿದರು.

‘ಬಾಗೇಪಲ್ಲಿ ತಾಲ್ಲೂಕಿನಲ್ಲಿ ಈ ಹಿಂದೆ ಸಿಪಿಎಂ 3 ಬಾರಿ ಅಧಿಕಾರ ಹಿಡಿದಿತ್ತು. ಆದರೆ, ಕೆಲ ವರ್ಷಗಳಿಂದ ಪಕ್ಷದೊಳಗೆ ಗುಂಪುಗಾರಿಕೆ ಹೆಚ್ಚಾಗಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಮುಖಂಡರಿಂದ ಹಣ ಪಡೆದು ಪಕ್ಷದ್ರೋಹ ಮಾಡುವ ಪ್ರವೃತ್ತಿ ಹೆಚ್ಚಿದೆ. ಹೀಗಾಗಿ, ಪಕ್ಷ ಎಲ್ಲ ಚುನಾವಣೆಗಳಲ್ಲಿ ಸೋಲು ಅನುಭವಿಸುತ್ತಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಸಿಪಿಎಂ ಪಕ್ಷವನ್ನು ಹಲವು ವರ್ಷಗಳಿಂದ ಬೇರು ಮಟ್ಟದಿಂದ ಸಂಘಟಿಸಿದ್ದೇವೆ. ಜನರ ಧ್ವನಿಯಾಗಿ ಸಾಕಷ್ಟು ಹೋರಾಟ ನಡೆಸಿದ್ದೇವೆ. ಆದರೆ, ಪಕ್ಷದ ಸಿದ್ದಾಂತ ಮರೆತ ಕೆಲ ಮುಖಂಡರ ನಡವಳಿಕೆಯಿಂದಾಗಿ ಪಕ್ಷ ದುರ್ಬಲಗೊಳ್ಳುತ್ತಿದೆ’ ಎಂದು ಹೇಳಿದರು.

ಸಿಪಿಎಂ ಮುಖಂಡರಾದ ರಾಜು, ಎಲ್.ವೆಂಕಟೇಶ್, ಬಾಷಾ ಸಾಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.