ADVERTISEMENT

ಸಿರಿವಂತ ಶಾಸಕರು; ಚುನಾವಣೆಗೆ ಕಡಿಮೆ ವೆಚ್ಚ

ಡಿ.ಕೆ.ಶಿವಕುಮಾರ್, ಕೆ.ಎಚ್‌.ಪುಟ್ಟಸ್ವಾಮಿಗೌಡ, ಪ್ರಿಯಾಕೃಷ್ಣ ಗರಿಷ್ಠ ಸಂಪತ್ತಿನ ಶಾಸಕರು

ಡಿ.ಎಂ.ಕುರ್ಕೆ ಪ್ರಶಾಂತ
Published 21 ಜುಲೈ 2023, 20:05 IST
Last Updated 21 ಜುಲೈ 2023, 20:05 IST
   

ಚಿಕ್ಕಬಳ್ಳಾಪುರ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‍ಇಡಬ್ಲ್ಯು) ವರದಿಗಳ ಪ್ರಕಾರ ದೇಶದಲ್ಲಿ ಗರಿಷ್ಠ ಸಂಪತ್ತು ಹೊಂದಿರುವ 20 ಶಾಸಕರ ಪಟ್ಟಿಯಲ್ಲಿ ರಾಜ್ಯದ 12 ಮಂದಿ ಶಾಸಕರು ಸ್ಥಾನ ಪಡೆದಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹಾಗೂ ಗೋವಿಂದರಾಜ ನಗರ ಶಾಸಕ ಪ್ರಿಯಾಕೃಷ್ಣ ಅವರ ಆಸ್ತಿ ಮೌಲ್ಯ ಸಾವಿರ ಕೋಟಿ ದಾಟಿದೆ. ಹೀಗೆ ಸಾವಿರ ಕೋಟಿಗಳ ಲೆಕ್ಕದಲ್ಲಿ ಬಾಳುವ ಈ ಕುಳಗಳು ವಿಧಾನಸಭೆ ಚುನಾವಣೆಯಲ್ಲಿ ಖರ್ಚು ಮಾಡಿದ್ದು ಲಕ್ಷಗಳಷ್ಟೇ!

ಚುನಾವಣಾ ಆಯೋಗ ಒಬ್ಬ ಅಭ್ಯರ್ಥಿ ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಠ ₹40 ಲಕ್ಷದವರೆಗೆ ವೆಚ್ಚ ಮಾಡಲು ಮಿತಿ ವಿಧಿಸಿತ್ತು. ಚುನಾವಣೆ ನಂತರ ಅಭ್ಯರ್ಥಿಗಳು ಖರ್ಚು–ವೆಚ್ಚದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.

ADVERTISEMENT

₹1,400ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಡಿ.ಕೆ.ಶಿವಕುಮಾರ್ ತಮ್ಮ ಚುನಾವಣಾ ವೆಚ್ಚ ₹18.29ಲಕ್ಷ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ₹1,200ಕೋಟಿಗೂ ಹೆಚ್ಚು ಆಸ್ತಿ ಒಡೆಯ ಕೆ.ಎಚ್‌.ಪುಟ್ಟಸ್ವಾಮಿಗೌಡ ಅವರ ಚುನಾವಣಾ ವೆಚ್ಚ ₹10.78ಲಕ್ಷ. ₹1,100ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಪ್ರಿಯಾ ಕೃಷ್ಣ ₹2.06ಲಕ್ಷ ವ್ಯಯಿಸಿದ್ದಾರೆ. ಪ್ರಿಯಾ ಕೃಷ್ಣ ಅವರ ತಂದೆ ಹಾಗೂ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಕೂಡ ಸಿರಿವಂತ ಶಾಸಕರ ಪಟ್ಟಿಯಲ್ಲಿ ಇದ್ದಾರೆ. ಅವರ ಚುನಾವಣಾ ವೆಚ್ಚ ₹3.30ಲಕ್ಷ.

ಎಡಿಆರ್ ಮತ್ತು ಎನ್‍ಇಡಬ್ಲ್ಯು ವರದಿಯಲ್ಲಿರುವ ರಾಜ್ಯದ ಸಿರಿವಂತರ ಶಾಸಕರೆಲ್ಲರೂ ಚುನಾವಣೆಯಲ್ಲಿ ಲಕ್ಷಗಳನ್ನು ವೆಚ್ಚ ಮಾಡಿರುವುದಾಗಿ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಪ್ರಚಾರ ಸಾಮಗ್ರಿಗಳಾದ ಧ್ವನಿವರ್ಧಕ ಸಾಧನಗಳು, ಬ್ಯಾನರ್, ಕರಪತ್ರ, ಭಿತ್ತಿಪತ್ರಗಳು, ವಾಹನಗಳ ಬಾಡಿಗೆ, ಊಟ, ವಸತಿ ವ್ಯವಸ್ಥೆ, ಪೀಠೋಪಕರಣಗಳ ದರ–ಹೀಗೆ ವೆಚ್ಚಗಳ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ದಾಖಲಿಸಬೇಕು.

ಚುನಾವಣೆ ಸಮಯಲ್ಲಿ ಅಭ್ಯರ್ಥಿಗಳು ಕುಕ್ಕರ್, ಮಿಕ್ಸಿ ಹಂಚಿಕೆ, ಸ್ಟಾರ್ ನಟ ನಟಿಯರನ್ನು ಕರೆಸಿ ಪ್ರಚಾರ, ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರಿಂದ ರ‍್ಯಾಲಿ–ಹೀಗೆ ವಿವಿಧ ರೀತಿಯಲ್ಲಿ ‘ದೊಡ್ಡ’ ಪ್ರಚಾರ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.