ADVERTISEMENT

ಗುಡಿಬಂಡೆ: ಭಾರಿ ಮಳೆಯಿಂದಾಗಿ ಕೆರೆ, ಕುಂಟೆ ಭರ್ತಿ: ರಸ್ತೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 6:03 IST
Last Updated 20 ನವೆಂಬರ್ 2021, 6:03 IST
ಗುಡಿಬಂಡೆ ಪಟ್ಟಣದ ಸಮೀಪದ ಅಮಾನಿಬೈರಸಾಗರ ಕೆರೆ ಕೋಡಿಯಲ್ಲಿ ರಭಸವಾಗಿ ಹರಿಯುತ್ತಿರುವ ನೀರು
ಗುಡಿಬಂಡೆ ಪಟ್ಟಣದ ಸಮೀಪದ ಅಮಾನಿಬೈರಸಾಗರ ಕೆರೆ ಕೋಡಿಯಲ್ಲಿ ರಭಸವಾಗಿ ಹರಿಯುತ್ತಿರುವ ನೀರು   

ಗುಡಿಬಂಡೆ: ತಾಲ್ಲೂಕಿನಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಪಟ್ಟಣದ ಅಮಾನಿಬೈರಸಾಗರ ಕೆರೆ ಕೊಡಿ 224 ಮೀಟರ್‌ ಉದ್ದಕ್ಕು ನೀರು ರಭಸದಿಂದ ಹರಿಯುತ್ತಿದೆ. ಇದರಿಂದ ತಾಲ್ಲೂಕಿನ 94 ಕೆರೆಗಳು ಭರ್ತಿಯಾಗಿವೆ. ಸುರಸದ್ಮಗಿರಿ ಬೆಟ್ಟದ ಪುರಾತನ ಕೋಟೆ ಬುರುಜು ಬಿದ್ದಿದೆ. 22 ಮನೆ ಕುಸಿತವಾಗಿದೆ.

ಕುಶಾವತಿ ನದಿ ಪಾತ್ರದ ಅಮಾನಿಬೈರಸಾಗರ, ಯಾದಾರ್ಲಹಳ್ಳಿ, ದರಬೂರು, ಹಂಪಸಂದ್ರ, ಲಕ್ಕೇನಹಳ್ಳಿ, ಕಡೇಹಳ್ಳಿ ಕೆರೆ ಕಾಲುವೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕಾಲುವೆ ಮಾರ್ಗದ ಎಲ್ಲಾ ರಸ್ತೆಗಳು ಜಲಾವೃತಗೊಂಡು, ರಸ್ತೆ ಸಂಚಾರಕ್ಕೆ ತೊಡಕಾಗಿದೆ.

ರಸ್ತೆ ಮಾರ್ಗಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ತಹಶೀಲ್ದಾರ್ ಸಿಗ್ಬತ್ತುಲ್ಲಾ ಮತ್ತು ವೃತ್ತ ನಿರೀಕ್ಷಕ ಲಿಂಗರಾಜು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಕ್ರಮತೆಗೆದುಕೊಂಡು, ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ಬ್ಯಾರಿಕೇಡ್‌ ಹಾಕಿದ್ದಾರೆ. ಅಮಾನಿಬೈರಸಾಗರ ಕೆರೆಯ ಬಳಿಯಲ್ಲಿ ಟ್ರ್ಯಾಕ್ಟರ್ ಮೂಲಕ ರಸ್ತೆ ದಾಟಲು ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಮೂರು ಅಡಿ ಹೆಚ್ಚು ನಿಂತ ನೀರು: ತಾಲ್ಲೂಕಿನ ಹಂಪಸಂದ್ರ ಗ್ರಾಮದ ಕೆರೆಪಕ್ಕದಲ್ಲಿ ಹಾದುಹೋಗುವ ರಸ್ತೆ ಮೇಲೆ ಸುಮಾರು ಮೂರು ಅಡಿಗೂ ಹೆಚ್ಚು ಎತ್ತರದಲ್ಲಿ ನೀರು ನಿಂತು ಗುಡಿಬಂಡೆ, ಬಾಗೇಪಲ್ಲಿ ಮಾರ್ಗದ ರಸ್ತೆ ಸ್ಥಗಿತಗೊಂಡಿದೆ.

ಮಾಚಹಳ್ಳಿ ಗ್ರಾಮದ ಕೆರೆ ತುಂಬಿ ದಶಕಗಳ ನಂತರ ಕೋಡಿ ಹರಿಯುತ್ತಿದೆ. ಅಮಾನಿಬೈರಸಾಗರ ಕೆರೆ ಕೋಡಿ ಅಪಾಯ ಮಟ್ಟ ಮೀರಿ ಹರಿಯುವುದರ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಎಸ್.ಪಿ. ಮಿಥುನ್ ಕುಮಾರ್ ಮತ್ತು ಎ.ಸಿ ರಘುನಂದನ್ ಸ್ಥಳಕ್ಕೆ ಭೇಟಿ ನೀಡಿದರು.

ತಾಲೂಕಿನಲ್ಲಿ ಪಟ್ಟಣ ಸೇರಿದಂತೆ ಕಸಬಾ ಹೋಬಳಿಯಲ್ಲಿ ಮೂರು ಮತ್ತು ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಬೀಚಗಾನಹಳ್ಳಿ ಕ್ರಾಸ್‌ನಲ್ಲಿ ಒಂದು ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್ ಸಿಗಬತುಲ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.