ADVERTISEMENT

ಗ್ರಾಮೀಣ ಮಕ್ಕಳು ಕ್ರೀಡೆಯಲ್ಲಿ ಮಿಂಚಲಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:00 IST
Last Updated 1 ಮಾರ್ಚ್ 2021, 4:00 IST
ಶಿಡ್ಲಘಟ್ಟದ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ಅನ್ನು ತಾ.ಪಂ ಇಒ ಚಂದ್ರಕಾಂತ್ ಉದ್ಘಾಟಿಸಿದರು
ಶಿಡ್ಲಘಟ್ಟದ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ಅನ್ನು ತಾ.ಪಂ ಇಒ ಚಂದ್ರಕಾಂತ್ ಉದ್ಘಾಟಿಸಿದರು   

ಶಿಡ್ಲಘಟ್ಟ: ‘ಇಡೀ ಜಿಲ್ಲೆಯಲ್ಲಿಯೇ ಮಾದರಿ ಎನಿಸುವಂತಹ ಬ್ಯಾಸ್ಕೆಟ್ ಬಾಲ್ ಕೋರ್ಟ್ ಅನ್ನು ನರೇಗಾ ಯೋಜನೆಯಲ್ಲಿ ಅಪ್ಪೇಗೌಡನಹಳ್ಳಿಯಲ್ಲಿ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಕ್ರೀಡಾ ಶಿಕ್ಷಕರಿಂದ ತರಬೇತಿ ಕೊಡಿಸಿ, ನಮ್ಮ ಭಾಗದ ಮಕ್ಕಳು ಕ್ರೀಡಾ ಸಾಧಕರಾಗಿ ಹೊರಹೊಮ್ಮುವಂತಾಗಲಿ’ ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ತಿಳಿಸಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಬ್ಯಾಸ್ಕೆಟ್ ಬಾಲ್ ಕೋರ್ಟ್ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆ ಕೇವಲ ನಗರ ಪ್ರದೇಶದವರಿಗೆ ಅತ್ಯುತ್ತಮ ಕ್ರೀಡಾ ತರಬೇತಿ, ಅವಕಾಶಗಳು ಲಭ್ಯವಾಗುತ್ತಿದ್ದವು. ಆದರೆ ಈಗ ಗ್ರಾಮೀಣ ಮಕ್ಕಳಿಗೂ ಈ ಅವಕಾಶವನ್ನು ನರೇಗಾ ಯೋಜನೆಯ ಮೂಲಕ ವಿಸ್ತರಿಸಲಾಗಿದೆ. ಮೈದಾನದ ಅಭಿವೃದ್ಧಿಗೆ ಹಣ ನೀಡುತ್ತಿರುವುದನ್ನು ಪ್ರತಿಯೊಂದು ಗ್ರಾಮದವರೂ ಸದುಪಯೋಗ ಮಾಡಿಕೊಳ್ಳಬೇಕು. ಇದರಿಂದ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಟ್ಟಿಕೊಡಲು ಸಾಧ್ಯವಿದೆ’ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ‘ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುವಿನ ಮೂಲಕ ನಮ್ಮ ಹಳ್ಳಿ ಮಕ್ಕಳಿಗೆ ತರಬೇತಿ ಕೊಡಿಸುತ್ತೇವೆ. ತಾಲ್ಲೂಕಿನ ವಿವಿಧ ಭಾಗಗಳ ಮಕ್ಕಳೂ ಸಹ ಈ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ನಮ್ಮ ಮಕ್ಕಳಿಗೆ ಉತ್ತಮ, ಶಿಕ್ಷಣ, ಕ್ರೀಡಾ ತರಬೇತಿ ನೀಡುವುದು ನಮ್ಮ ಉದ್ದೇಶ. ಅವರವರ ಆಸಕ್ತಿ ಕ್ಷೇತ್ರಗಳನ್ನು ಮಕ್ಕಳು ಆಯ್ಕೆ ಮಾಡಿಕೊಂಡು ಸಾಧನೆ ಮಾಡಿ ನಮ್ಮ ಜಿಲ್ಲೆಗೆ ಕೀರ್ತಿ ತರಲಿ’ ಎಂದು ನುಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯರಾದ ಬಿ.ಎಂ.ಜಯರಾಮ್, ಮಂಜುಳಮ್ಮ, ರಸಿಕಾ, ದ್ಯಾವಪ್ಪ, ಗಂಗರತ್ನ, ಮಂಜುಳಮ್ಮ, ಸುದೀಪ್. ನಾರಾಯಣಪ್ಪ, ಮಂಜುಳಮ್ಮ, ಮುನಿಯಪ್ಪ, ಗೀತಾ, ನಾಗರಾಜು, ವೆಂಕಟರತ್ನ, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಅಂಬರೀಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.