ADVERTISEMENT

ಕೈವಾರ: ಕೋವಿಡ್‌ ಮಾರ್ಗಸೂಚಿ ಪಾಲನೆ; ಸರಳ ಬ್ರಹ್ಮ ರಥೋತ್ಸವ

ಪೊಲೀಸ್‌ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 3:37 IST
Last Updated 29 ಮಾರ್ಚ್ 2021, 3:37 IST
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಅಮರನಾರೇಯಣ ಸ್ವಾಮಿ ಬ್ರಹ್ಮ ರಥೋತ್ಸವ
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಅಮರನಾರೇಯಣ ಸ್ವಾಮಿ ಬ್ರಹ್ಮ ರಥೋತ್ಸವ   

ಚಿಂತಾಮಣಿ: ರಾಜ್ಯದ ಪುರಾಣ ಪ್ರಸಿದ್ಧ ಕೈವಾರದ ಅಮರನಾರೇಯಣಸ್ವಾಮಿ ಬ್ರಹ್ಮ ರಥೋತ್ಸವವು ಫಾಲ್ಗುಣ ಮಾಸದ ಹೋಳಿ ಹುಣ್ಣಿಮೆಯ ಭಾನುವಾರದಂದು ಸರಳವಾಗಿ ನಡೆಯಿತು.ಸರ್ಕಾರದ ಆದೇಶದಂತೆ ದೇವಾಲಯದ ಒಳ ಆವರಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ರಥೋತ್ಸವದ ಅಂಗವಾಗಿ ದೇವಾಲಯದ ಒಳಗೆ ಹಾಗೂ ಹೊರಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವಾಲಯಕ್ಕೆ ಆಗಮಿಸಿ ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ಕೋವಿಡ್‌ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಪ್ರತಿವರ್ಷದಂತೆ ದೇವಾಲಯದ ಹೊರಗಡೆ ವಿಜೃಂಭಣೆಯಿಂದ ರಥೋತ್ಸವ ನಡೆಸಿ ತೇರು ಎಳೆಯುವುದನ್ನು ರದ್ದುಪಡಿಸಿ ಸಂಪ್ರದಾಯದಂತೆ ದೇವಾಲಯದ ಪ್ರಾಂಗಣದಲ್ಲಿ ಅತ್ಯಂತ ಕಡಿಮೆ ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನಡೆಸಲಾಯಿತು.

ADVERTISEMENT

ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳು ಮತ್ತು ಭಜನೆಯೊಂದಿಗೆ ಯೋಗಿನಾರೇಯಣ ಯತೀಂದ್ರರ ಉತ್ಸವಮೂರ್ತಿಯನ್ನು ಕರೆತಂದು ದೇವಾಲಯದ ಪ್ರಾಂಗಣದಲ್ಲಿ ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಯಿತು. ಸದ್ಗುರು ಯೋಗಿನಾರೇಯಣ ಯತೀಂದ್ರರ ಪರವಾಗಿ ಧರ್ಮಾಧಿಕಾರಿ ಎಂ.ಆರ್. ಜಯರಾಮ್‌ ದಂಪತಿ ಶ್ರದ್ಧಾಭಕ್ತಿಯಿಂದ ಶ್ರೀಕೃಷ್ಣ ಗಂಧೋತ್ಸವವನ್ನು ನೆರವೇರಿಸಿದರು.

ದೇವಾಲಯದ ಒಳ ಪ್ರಾಂಗಣದಲ್ಲಿ ರಥ ಪೂಜೆ ನೆರವೇರಿಸಲಾಯಿತು.ನೂತನವಾಗಿ ನವೀಕರಣಗೊಂಡಿರುವ ಕಲ್ಯಾಣ ಮಂಟಪದಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀಅಮರನಾರೇಯಣಸ್ವಾಮಿ ಉತ್ಸವ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಸ್ಥಾನ ಸೇವೆಯನ್ನು ಸಮರ್ಪಿಸಲಾಯಿತು.

ಅಲಂಕೃತಗೊಂಡಿದ್ದ ರಥಕ್ಕೆ ಶ್ರೀದೇವಿ, ಭೂದೇವಿ ಸಮೇತ ಉತ್ಸವ ವಿಗ್ರಹಗಳನ್ನು ವೇದಘೋಷ, ಮಂಗಳವಾದ್ಯದೊಂದಿಗೆ ಕರೆ ತರಲಾಯಿತು. ರಥದಲ್ಲಿ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ದೇವಾಲಯದ ಒಳ ಪ್ರದಕ್ಷಿಣೆ ಮಾಡಲಾಯಿತು. ಭಾಗವಹಿಸಿದ್ದ ಭಕ್ತರು ಬಾಳೆಹಣ್ಣು, ಧವನವನ್ನು ತೇರಿಗೆ ಅರ್ಪಿಸಿ ಹರಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.