ADVERTISEMENT

ಸಾಧು ಸಂತರ ತಪೋಭೂಮಿ ಕೈವಾರ

ಭಕ್ತಿ, ಅಧ್ಯಾತ್ಮದ ಪ್ರಕೃತಿ ಸೌಂದರ್ಯದ ಅದ್ಭುತ ತಾಣ

ಎಂ.ರಾಮಕೃಷ್ಣಪ್ಪ
Published 1 ಸೆಪ್ಟೆಂಬರ್ 2018, 11:25 IST
Last Updated 1 ಸೆಪ್ಟೆಂಬರ್ 2018, 11:25 IST
ಕೈವಾರದ ಯೋಗನರಸಿಂಹಸ್ವಾಮಿ ಗುಹೆಯ ಮೇಲ್ನೋಟದ ದೃಶ್ಯ.
ಕೈವಾರದ ಯೋಗನರಸಿಂಹಸ್ವಾಮಿ ಗುಹೆಯ ಮೇಲ್ನೋಟದ ದೃಶ್ಯ.   

ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಕೈವಾರವೂ ಒಂದು. ಇದು ಸಾಧು ಸಂತರ ತಪೋಭೂಮಿ. ಯೋಗಿನಾರೇಯಣ ಯತೀಂದ್ರರು ಜನ್ಮ ತಾಳಿ ಸಮಾಜಕ್ಕೆ ಕಾಲಜ್ಞಾನ ಭವಿಷ್ಯವಾಣಿ ನೀಡಿದ ಕ್ಷೇತ್ರ. 5-6 ಕಿ.ಮೀ ವ್ಯಾಪ್ತಿಯಲ್ಲಿ ಗಿರಿಗಳ ತಪ್ಪಲಿನ ಪ್ರಶಾಂತ ವಾತಾವರಣದಲ್ಲಿ 4 ಉದ್ಭವಮೂರ್ತಿಗಳು ಜನರ ಭಕ್ತಿಯ ತಾಣಗಳಾಗಿವೆ.

ಚಿಂತಾಮಣಿಯ ಅಂಬಾಜಿದುರ್ಗದಿಂದ ಕೈವಾರದವರೆಗೆ ಹಬ್ಬಿರುವ ಪರ್ವತಶ್ರೇಣಿ ಕ್ಷೇತ್ರದ ಸೌಂದರ್ಯವನ್ನು ಹೆಚ್ಚಿಸಿದೆ. ಹಲವಾರು ಮುನಿವರ್ಯರು ತಪಸ್ಸು ಮಾಡಿದ ತಾಣವೂ ಇದು. ಕೈವಾರ ಬೆಟ್ಟ, ತಪತೇಶ್ವರ ಬೆಟ್ಟ, ಶೇಷಾದ್ರಿಬೆಟ್ಟಗಳು ಭಕ್ತಿ, ಅಧ್ಯಾತ್ಮ, ಧಾರ್ಮಿಕವಾಗಿ ವಿಶಿಷ್ಟ ಮನ್ನಣೆ ಪಡೆದಿವೆ.

ಇಲ್ಲಿಯ ಯೋಗಾನರಸಿಂಹಸ್ವಾಮಿ ಗುಹೆ, ವಡ್ಡಹಳ್ಳಿಯ ಗವಿ ಚೆನ್ನರಾಯಸ್ವಾಮಿ, ಚಿನ್ನಸಂದ್ರದ ತಿರುಪಳ್ಳರಾಯಸ್ವಾಮಿ, ಆಲಂಬಗಿರಿಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ ಭಕ್ತರಿಗೆ ಶಾಂತಿ, ನೆಮ್ಮದಿ ನೀಡುತ್ತವೆ. ಬೆಟ್ಟಗಳ ಇಳಿಜಾರಿನಲ್ಲಿ ಹಸಿರಿನ ಸುಂದರ ವಾತಾವರಣದಲ್ಲಿ ಉದ್ಭವಿಸಿವೆ. ಈ ಕುರಿತು ಯತೀಂದ್ರರ ಕೀರ್ತನೆಗಳಲ್ಲಿ ನಾಲ್ಕು ಉದ್ಭವ ಮೂರ್ತಿಗಳ ಉಲ್ಲೇಖವೂ ಇದೆ.

ADVERTISEMENT

ಕೈವಾರದ ತಪೋವನದ ಬಳಿ ಇರುವ ಯೋಗಾನರಸಿಂಹಸ್ವಾಮಿ ಗುಹೆ ಐತಿಹಾಸಿಕ, ಏಕಶಿಲಾ ಬಂಡೆಯ ಮೇಲೆ ಉದ್ಭವ ನರಸಿಂಸಸ್ವಾಮಿ. ಸುತ್ತಲೂ ನಯನ ಮನೋಹರ ಬೆಟ್ಟದ ಸಾಲುಗಳು. ಆಧ್ಯಾತ್ಮಿಕ ಪ್ರದೇಶ. ಋಷಿ, ಮುನಿಗಳು ತಪಸ್ಸು ಮಾಡಿ ಸಿದ್ದಿಯನ್ನು ಪಡೆಯಲು ಇಲ್ಲಿಗೆ ಬಂದು ನೆಲೆಸುತ್ತಿದ್ದರು. ಯಾಗ, ಯಜ್ಞಗಳನ್ನು ಮಾಡಿ ಧರ್ಮ, ಅಧ್ಯಾತ್ಮಿಕತೆ ಕುರಿತು ಪ್ರಚಾರ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ.

ಯತೀಂದ್ರರು ಇಲ್ಲಿಯೇ ತಪಸ್ಸು ಮಾಡಿ ಸಿದ್ಧಿ ಪಡೆದವರು. ನಂತರ ನಾರಾಯಣಪ್ಪ, ನಾರೇಯಣ ಯತೀಂದ್ರರಾದರು. ಯೋಗಿ ನಾರೇಯಣ ಮಠದಲ್ಲಿ ಸುಂದರವಾದ ವೈಕುಂಠ ಯಾಗಶಾಲೆ ಇದೆ. ಇದು ಜಪ ತಪ ಮಾಡುವವರಿಗೆ ಅನುಕೂಲವಾಗಿದೆ.

ಶ್ರೀಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಇದನ್ನೇ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ವೇಷ ಬದಲಿಸಿಕೊಂಡು ಈ ಸ್ಥಳದಲ್ಲಿ ಸುತ್ತಾಡುತ್ತಿದ್ದರು. ಇದರ ಸಮೀಪದಲ್ಲಿ ಭೀಮಲಿಂಗೇಶ್ವರ ದೇವಸ್ಥಾನದಲ್ಲಿ ಪಾಂಡವರು ಒಂದೊಂದು ಲಿಂಗ ಸ್ಥಾಪನೆ ಮಾಡಿದ್ದಾರೆ ಎಂದು ಎಂಬುದರ ಐತಿತ್ಯಗಳು ಇಲ್ಲಿವೆ ಎಂಬುದು ಇತಿಹಾಸಜ್ಞರ ವಿವಿರಣೆ.

ಆಲಂಬಗಿರಿಯ ಬೆಟ್ಟದ ತಪ್ಪಲಿನಲ್ಲಿ ವೆಂಕಟರಮಣಸ್ವಾಮಿಯೂ ಉದ್ಭವಮೂರ್ತಿ. ಇಲ್ಲಿಯ ವೆಂಕಟತೀರ್ಥ ಕೊಳದಲ್ಲಿ ಪರಿಶುದ್ಧ ನೀರಿದ್ದು, ಎಷ್ಟೇ ಬರ ಸ್ಥಿತಿ ಇದ್ದರೂ ಖಾಲಿ ಆಗುವುದಿಲ್ಲ. ಈ ನೀರನ್ನು ತಿರುಪತಿಯ ವೆಂಕಟೇಶ್ವರಸ್ವಾಮಿ ಅಭಿಷೇಕಕ್ಕೆ ಒಯ್ಯುತ್ತಿದ್ದರು ಎಂಬ ಉಲ್ಲೇಖವೂ ಪುರಾಣಗಳಲ್ಲಿದೆ. ಇಲ್ಲಿ ಪ್ರತಿ ಹುಣ್ಣಿಮೆಗೆ ಗಿರಿಪ್ರದಕ್ಷಿಣೆ ನಡೆಯುತ್ತದೆ.

ಚಿನ್ನಸಂದ್ರದಿಂದ ಅರ್ಧ ಕಿ.ಮೀ ದೂರದಲ್ಲಿ 50-60 ಮೆಟ್ಟಿಲುಗಳ ಮೇಲಿರುವ ತಿರುಪಳ್ಳರಾಯಸ್ವಾಮಿ ಭಕ್ತಿಯ ಸಂಕೇತವಾಗಿದೆ. ನೀರೊಳಗೆಯೇ ತಿರುಪಳ್ಳರಾಯಸ್ವಾಮಿ ಇರುವುದು ವಿಶೇಷ. ಕೈವಾರಕ್ಕೆ ಬರುವವರೆಲ್ಲರೂ ಇಲ್ಲಿ ಬರುವುದು ವಾಡಿಕೆ. ಸ್ವಾಮಿ ದರ್ಶನ ಪಡೆಯಬೇಕು ಎಂಬುದನ್ನು ತಾತಯ್ಯನವರು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದಾರೆ.

ಕೈಲಾಸಗಿರಿ ದಾರಿಯಲ್ಲಿ ಶೇಷಾದ್ರಿ ಬೆಟ್ಟದ ಸಮೀಪ ಗವಿ ಚೆನ್ನರಾಯಸ್ವಾಮಿ ಉದ್ಭವಮೂರ್ತಿ ಇದೆ. ಶಿಲಾ ತೋರಣದಂತಿರುವ ಬೆಟ್ಟಗಳ ಸಾಲುಗಳ ನಡುವೆ ದೇವಾಲಯವಿದೆ. ರಾಮಭಕ್ತ ಆಂಜನೇಯಸ್ವಾಮಿ ಇಲ್ಲಿ ನೆಲೆಸಿದ್ದಾರೆ ಎಂಬುದು ನಂಬಿಕೆ. ಇಅಂತರ್ಗಾಮಿಯಾಗಿ ಹರಿದು ಬರುವ ಪಾವನ ಗಂಗೆಯ ಶಿಲಾಬಂಡೆ ಶಿರೋಭಾಗದಲ್ಲಿ ಕಲ್ಯಾಣಿ ಇದೆ. ಇಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲ ನಾಶವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಶ್ರಾವಣದಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಯುತ್ತವೆ. ಪರ್ವತ ಶ್ರೇಣಿಗಳ ಪ್ರದೇಶದಲ್ಲಿ ಉದ್ಭವಮೂರ್ತಿಗಳ ಸಂಗಮದ ವಿಹಂಗಮ ನೋಟ ಅದ್ಭುತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.