ADVERTISEMENT

‘ಸತ್ಯಸಾಯಿ ಗ್ರಾಮಕ್ಕೆ ನೀರು ಒದಗಿಸಲು ಬದ್ಧ’

ಸಣ್ಣ ನೀರಾವರಿ ಸಚಿವ ಬೋಸರಾಜು ಭರವಸೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:45 IST
Last Updated 13 ನವೆಂಬರ್ 2025, 5:45 IST
ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸಣ್ಣ ನೀರಾವರಿ ಸಚಿವ ಎನ್‌.ಎಸ್.ಬೋಸರಾಜು ಅವರಿಗೆ ಸದ್ಗುರು  ಮಧುಸೂದನ ಸಾಯಿ ಸ್ಮರಣಿಕೆ ನೀಡಿದರು
ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸಣ್ಣ ನೀರಾವರಿ ಸಚಿವ ಎನ್‌.ಎಸ್.ಬೋಸರಾಜು ಅವರಿಗೆ ಸದ್ಗುರು  ಮಧುಸೂದನ ಸಾಯಿ ಸ್ಮರಣಿಕೆ ನೀಡಿದರು   

ಚಿಕ್ಕಬಳ್ಳಾಪುರ: ಸತ್ಯಸಾಯಿ ಗ್ರಾಮಕ್ಕೆ ವಿವಿಧ ಯೋಜನೆಗಳಡಿ ನೀರು ಒದಗಿಸಲು ಮತ್ತು ಆಶ್ರಮದ ಪರಿಸರದಲ್ಲಿ ಜಲ ಸಂರಕ್ಷಣೆಯ ಪ್ರಯತ್ನಕ್ಕೆ ಇನ್ನಷ್ಟು ಉತ್ತೇಜನ ನೀಡಲು ಸರ್ಕಾರವು ಬದ್ಧವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್.ಬೋಸರಾಜು ಭರವಸೆ ನೀಡಿದರು.

ತಾಲ್ಲೂಕಿನ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದ ಬುಧವಾರದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ADVERTISEMENT

ಸತ್ಯಸಾಯಿ ಬಾಬಾ ಅವರ ‘ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ. ಸದಾ ಪ್ರೀತಿಸಿ, ಎಂದಿಗೂ ನೋವು ಕೊಡಬೇಡಿ’ ಸಂದೇಶಗಳು ಜಗತ್ತನ್ನು ಬೆಳಗುತ್ತಿವೆ. ಸದ್ಗುರು ಮಧುಸೂದನ ಸಾಯಿ ಅವರು ಅನ್ನ, ಆರೋಗ್ಯ ಮತ್ತು ಅಕ್ಷರ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಮಾಡುತ್ತಿದ್ದಾರೆ. ಉಚಿತವಾಗಿ ಸೇವೆ ಒದಗಿಸುವುದಷ್ಟೇ ಅಲ್ಲ, ಫಲಾನುಭವಿಗಳನ್ನು ಗೌರವದಿಂದ ನಡೆಸಿಕೊಳ್ಳುವುದು ಈ ಸಂಸ್ಥೆಯ ವಿಶೇಷ ಎಂದು ಬಣ್ಣಿಸಿದರು.

ಸದ್ಗುರು ಮಧುಸೂದನ ಸಾಯಿ, ಆಶ್ರಮದಲ್ಲಿ ಜಲಸಂರಕ್ಷಣೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ನಿರಂತರ ಪೂರೈಕೆಗಾಗಿ ಮನವಿ ಮಾಡಿದ್ದೆವು. ಶಾಸಕರಾದ ಪ್ರದೀಪ್ ಈಶ್ವರ್ ಅವರೊಂದಿಗೆ ನ.18 ರಂದು ಜಕ್ಕಲಮೊಡಗು ಜಲಾಶಯದಿಂದ ಆಶ್ರಮಕ್ಕೆ ನೀರು ಕೊಡುವ ಯೋಜನೆಯ ಭೂಮಿಪೂಜೆ ನಡೆಯಲಿದೆ ಎಂದು ತಿಳಿಸಿದರು.  

ನಮ್ಮ ಆಶ್ರಮದಲ್ಲಿ ಕೊಳವೆಬಾವಿಗಳ ಪುನಶ್ಚೇತನ ಸೇರಿದಂತೆ ಜಲಸಂರಕ್ಷಣೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ ದಿನದಿಂದ ದಿನಕ್ಕೆ ಸೇವಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯು ಉದ್ಘಾಟನೆಯಾದ ನಂತರ ನೀರು, ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಈಗ ಇದು ಜಾಗತಿಕ ಗ್ರಾಮವಾಗಿದೆ. ವಿಶ್ವದ ಎಲ್ಲ ದೇಶಗಳಿಂದ ಅತಿಥಿಗಳು ಇಲ್ಲಿಗೆ ಬರುತ್ತಿದ್ದಾರೆ ಈ ಹಂತದಲ್ಲಿ ಸರ್ಕಾರವು ನೀರು ಪೂರೈಕೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿದರು. ಪವರ್ ಮೆಕ್ ಪ್ರಾಜೆಕ್ಟ್ಸ್‌ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಬಾಬು ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ’ ನೀಡಲಾಯಿತು. 

ಅರ್ಜೆಂಟೈನಾ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕರೀನಾ ಅಲೆಜಂಡ್ರಾ ಸರೊ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಸಮುದಾಯ ಆರೋಗ್ಯ ಸೇವೆ ಕುರಿತು ಸಹಾಯಕ ಪ್ರಾಧ್ಯಾಪಕ ಎಂ.ಎಸ್.ಫಣೀಂದ್ರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.