
ಚಿಕ್ಕಬಳ್ಳಾಪುರ: ಸತ್ಯ ಸಾಯಿ ವಿಶ್ವವಿದ್ಯಾಲಯದಿಂದ ರೈತರಿಗೆ ಕೌಶಲ ಪ್ರಮಾಣೀಕರಣ ಪತ್ರ ನೀಡುವ ಹೊಸ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ ಎಂದು ಸದ್ಗುರು ಮಧುಸೂದನ ಸಾಯಿ ಘೋಷಿಸಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದ ಗುರುವಾರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗೆ ತಮ್ಮ ಕೌಶಲ ಹಾಗೂ ಜ್ಞಾನವನ್ನು ಗುರುತಿಸಿ, ಗೌರವಿಸುವ ಯಾವುದೇ ಪ್ರಮಾಣ ಪತ್ರಗಳು ಇಲ್ಲ. ಹೀಗಾಗಿ ಈ ಕಾರ್ಯಕ್ರಮನ್ನು ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.
ರೈತರಿಗೆ ರಾಗಿ ಬೆಳೆಯುವುದು ಹೇಗೆ, ಭತ್ತ ಬೆಳೆಯುವುದು ಹೇಗೆ ಎಂಬುದು ಗೊತ್ತು, ಆದರೆ ಅದನ್ನು ಸಮರ್ಪಕವಾಗಿ ದಾಖಲಿಸಿ, ಪ್ರಮಾಣೀಕರಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿಯೇ ನಾವು ನಮ್ಮ ವಿಶ್ವವಿದ್ಯಾಲಯದಲ್ಲಿ ಇಂತಹ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದೇವೆ. ರೈತರ ಕೌಶಲ, ಜ್ಞಾನವನ್ನು ನಿರ್ಣಯಿಸಿದ ನಂತರ ಪ್ರಮಾಣ ಪತ್ರಗಳನ್ನು ನೀಡುತ್ತೇವೆ ಎಂದು ವಿವರಿಸಿದರು.
ಕೇಂದ್ರ ಸಚಿವ ಸಚಿವ ವಿ ಸೋಮಣ್ಣ ಮಾತನಾಡಿ, ವಿಶ್ವದ ಭೂಪಟದಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮ ಗುರುತಿಸಿಕೊಂಡಿದೆ. ಸತ್ಯ ಸಾಯಿ ಬಾಬಾ ಅವರ ಮತ್ತೊಂದು ಅವತಾರವಾಗಿ ಸದ್ಗುರು ಮಧುಸೂದನ ಸಾಯಿ ಸೇವೆಗಳ ಮೂಲಕ ನಮ್ಮೆಲ್ಲರಿಗೂ ಆಶಿರ್ವಾದವನ್ನು ಮಾಡುತ್ತಿದ್ದಾರೆ. ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ಸದ್ಗುರು ಅವರು ದೂರದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಮಾತನಾಡಿ, ದಶಕದ ಹಿಂದೆ ನಾನು ಇಲ್ಲಿಗೆ ಬಂದಾಗ ಏನೇನು ಇರಲಿಲ್ಲ. ಇಂದು ಸತ್ಯ ಸಾಯಿ ಗ್ರಾಮವನ್ನು ನೋಡಿದರೆ ಏನಿಲ್ಲ? ಇಲ್ಲಿ ಈಗ ಎಲ್ಲವೂ ಇದೆ ಎಂದು ಹೇಳಿದರು.
ನಾನು ಮತ್ತು ಸಚಿವ ಸೋಮಣ್ಣ ಅವರು ಜನಸೇವಕರು, ಆದರೆ ನಿಸ್ವಾರ್ಥ ಸೇವೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮುದ್ದೇನಹಳ್ಳಿಗೆ ಬಂದು ಸದ್ಗುರು ಮಧುಸೂದನ ಸಾಯಿ ಅವರ ಕಾರ್ಯವಿಧಾನ ಗಮನಿಸಬೇಕು ಎಂದು ನುಡಿದರು.
ಪದ್ಮಭೂಷಣ ಸುಬ್ರಹ್ಮಣ್ಯನ್ ರಾಮದೊರೈ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ’ ನೀಡಲಾಯಿತು. ‘ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್’, ‘ಎಲ್ಸಿಯಾ ಟ್ರಸ್ಟ್’ಗೆ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್’ ಪುರಸ್ಕಾರ ನೀಡಲಾಯಿತು.
ಸರ್ಬಿಯಾ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ ದೇವಿ ಮೋಹನ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ ನೀಡಲಾಯಿತು.
ಸರ್ಬಿಯಾದ ಪ್ರತಿನಿಧಿ ಸಂದ್ರಾ ಮಿಲಿಸಾವಾಕ್ ಮತ್ತು ಮಾಂಟೆನೆಗ್ರೊ ದೇಶದ ಪ್ರತಿನಿಧಿ ಆಂಡ್ರಿಜಾನಾ ಮಿಕಾನೊವಿಕ್ ತಮ್ಮ ದೇಶಗಳ ಭಾಷೆ, ಕಲೆ, ಸಂಸ್ಕೃತಿ, ಸಂಗೀತ, ಪಾರಂಪರಿಕ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.