ADVERTISEMENT

ತಾಲ್ಲೂಕಿನಲ್ಲಿ ಕುಸಿದ ಮದ್ಯದ ಮಾರಾಟ

ಚಿಕ್ಕಬಳ್ಳಾಪುರ ವಿಧಾನಸಭೆ ಉಪ ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿ; ಎಲ್ಲೆಡೆ ಅಬಕಾರಿ ಇಲಾಖೆ ಅಧಿಕಾರಿಗಳ ತಪಾಸಣೆ

ಈರಪ್ಪ ಹಳಕಟ್ಟಿ
Published 29 ನವೆಂಬರ್ 2019, 19:30 IST
Last Updated 29 ನವೆಂಬರ್ 2019, 19:30 IST

ಚಿಕ್ಕಬಳ್ಳಾಪುರ: ಉಪ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತಂದ ಪರಿಣಾಮ, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಮದ್ಯದ ವಹಿವಾಟು ಕುಸಿತ ಕಂಡಿದೆ.

ಅಕ್ರಮ ಮದ್ಯ ಮಾರಾಟ ಹಾಗೂ ಮತದಾರರಿಗೆ ಮದ್ಯವನ್ನು ಆಮಿಷವಾಗಿ ಬಳಸದಂತೆ ಮದ್ಯದಂಗಡಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದ ಪರಿಣಾಮ, ನವೆಂಬರ್ 11 ರಿಂದ ನ.28ರ ವರೆಗೆ 18 ದಿನಗಳಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ₹23 ಲಕ್ಷ ಮದ್ಯ ಮಾರಾಟದ ಆದಾಯ ಕುಸಿತಗೊಂಡಿದೆ ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು.

ಚುನಾವಣೆಯಲ್ಲಿ ರಾಜಕಾರಣಿಗಳು ಗೆಲುವು ಕಂಡುಕೊಳ್ಳಲು ವಾಮ ಮಾರ್ಗದ ಮೂಲಕ ಯಥೇಚ್ಛವಾಗಿ ಹಣ, ಹೆಂಡದ ಹೊಳೆ ಹರಿಸುತ್ತಾರೆ ಎನ್ನುವುದು ಸಾಮಾನ್ಯ ಆರೋಪ. ಆದ್ದರಿಂದ, ಮದ್ಯಕ್ಕೆ ಕಡಿವಾಣ ಹಾಕುವಂತೆ ಚುನಾವಣಾ ಆಯೋಗ ಅಬಕಾರಿ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ತಲುಪಿಸಿದೆ ಎನ್ನಲಾಗಿದೆ.

ADVERTISEMENT

ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ 45 ವರ್ತಕರು ಪರವಾನಗಿ ಪಡೆದಿದ್ದಾರೆ. ಸಾಮಾನ್ಯ ದಿನಗಳಲ್ಲಿ ಒಂದು ತಿಂಗಳಿಗೆ ಸುಮಾರು 18 ಸಾವಿರ ಬಾಕ್ಸ್‌ಗಳು ಮಾರಾಟವಾಗುತ್ತವೆ. ಮಾರ್ಚ್‌ ನಿಂದ ಮೇ ತಿಂಗಳವರೆಗೆ ಮದುವೆಗಳು ಸೇರಿದಂತೆ ಶುಭಕಾರ್ಯಗಳು, ವಿವಿಧ ಕಾರ್ಯಕ್ರಮಗಳು ಉಳಿದ ತಿಂಗಳುಗಳಿಗಿಂತ ಹೆಚ್ಚಾಗಿಯೇ ಜರುಗುವುದರಿಂದ ಈ ಅವಧಿಯಲ್ಲಿ ಮದ್ಯದ ವಹಿವಾಟು ತುಸು ಹೆಚ್ಚಾಗಿಯೇ ಇರುತ್ತದೆ.

ಸದ್ಯ, ಮದ್ಯ ಮಾರಾಟ ಮಳಿಗೆ, ಬಾರ್ ಅಂಡ್ ರೆಸ್ಟೋರಂಟ್ ಮತ್ತು ವಸತಿ ಗೃಹಗಳ ಮೇಲೆ ಕಣ್ಣಿಟ್ಟಿರುವ ಅಬಕಾರಿ ಇಲಾಖೆ ಅಧಿಕಾರಿಗಳು ನಿಗದಿತ ಸಮಯಕ್ಕಿಂತ ಬೇಗ ಮಳಿಗೆ ತೆರೆಯುವುದು, ತಡವಾಗಿ ಬಾಗಿಲು ಮುಚ್ಚುವುದು, ನಿಯಮ ಉಲ್ಲಂಘಿಸಿ ಮದ್ಯ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಈಗಾಗಲೇ ನೀತಿ ಸಂಹಿತೆ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದ ಮೇಲೆ ಐದು ಸನ್ನದುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನೀತಿ ಸಂಹಿತೆ ಜಾರಿಯಾದ ದಿನದಿಂದಲೂ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಪ್ರತಿ ಮದ್ಯದಂಗಡಿಯ ವಹಿವಾಟಿನ ಮೇಲೆ ನಿಗಾ ಇಟ್ಟು, ನಿಗದಿತ ಮಿತಿ ಮೀರಿ ಮದ್ಯ ಮಾರಾಟ ಮಾಡದಂತೆ ಕಡಿವಾಣ ಹಾಕುತ್ತಿದೆ. ಹೀಗಾಗಿ ಅಂಗಡಿ ಮಾಲೀಕರು ನಿತ್ಯ ತಮಗಿರುವ ಬೇಡಿಕೆ ಹಾಗೂ ವ್ಯವಹಾರದ ಲೆಕ್ಕವನ್ನೂ ಚುನಾವಣಾ ಅಧಿಕಾರಿಗಳಿಗೆ ನೀಡಬೇಕಾಗಿದೆ.

ಸಗಟು ಮದ್ಯ ಮಾರಾಟ ಮಳಿಗೆಯಲ್ಲಿ ಪ್ರಸ್ತುತ ಒಬ್ಬ ಗ್ರಾಹಕನಿಗೆ 2.3 ಲೀಟರ್ ಮದ್ಯ ಇಲ್ಲವೇ ಮೂರು ಬೀಯರ್ ಬಾಟಲಿಗಳ ಮೇಲೆ ಹೆಚ್ಚು ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಸದ್ಯ ಪಾರ್ಟಿ, ವಿವಿಧ ಬಗೆಯ ಸತ್ಕಾರ ಕೂಟಗಳ ಆಯೋಜನೆಗೆ ಪರವಾನಗಿ ನೀಡುತ್ತಿಲ್ಲ. ಅನುಮತಿ ನೀಡಿದರೂ ಮದ್ಯದ ಬಾಟಲಿಗಳ ಸಂಖ್ಯೆಗೆ ಕಡಿವಾಣ ಬಿದ್ದಿದೆ ಎಂದು ಮದ್ಯ ಮಾರಾಟಗಾರರು ಹೇಳುತ್ತಿದ್ದಾರೆ.

ನೀತಿ ಸಂಹಿತೆಯ ಬಿಸಿಯಿಂದಾಗಿ ಇದೀಗ ಸಗಟು ಮದ್ಯ ಮಾರಾಟ ಮಳಿಗೆಗಳು ಬೆಳಿಗ್ಗೆ 10 ರಿಂದ ರಾತ್ರಿ 10.30ರ ವರೆಗೆ, ಬಾರ್‌ ಅಂಡ್‌ ರೆಸ್ಟೋರೆಂಟ್‌ ರಾತ್ರಿ 11.30ರ ಒಳಗೆ ಬಾಗಿಲು ಮುಚ್ಚುವುದು ಕಡ್ಡಾಯವಾಗಿದೆ.

ಹೀಗಾಗಿ, ತಡರಾತ್ರಿ ಬಾರ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ಗ್ರಾಹಕರು, ಇದೀಗ ಬೇಗ ಜಾಗ ಖಾಲಿ ಮಾಡುವುದು ಅನಿವಾರ್ಯವಾಗಿದೆ. ಇದರಿಂದಾಗಿ ಕೆಲ ಜನರು ಮನೆಗಳಿಗೆ ಪಾರ್ಸಲ್‌ ಕೊಂಡು ಹೋಗುತ್ತಿದ್ದಾರೆ. ಆದರೆ, ತಡರಾತ್ರಿವರೆಗೆ ಕೆಲಸ ಮಾಡುವ ಜನರಿಗೆ ಮದ್ಯ ಸಿಗದಂತಾಗಿದೆ ಎಂದು ಬಾರ್‌ನ ಮಾಲೀಕರೊಬ್ಬರು ಅಲವತ್ತುಕೊಂಡರು.

ರಾತ್ರಿ 11 ಗಂಟೆಗೆ ವ್ಯವಹಾರ ಮುಗಿಸಬೇಕು. ಸ್ವಚ್ಛತೆ ಪೂರ್ಣಗೊಳಿಸಿ ರಾತ್ರಿ 11.30ಕ್ಕೆ ಬಾಗಿಲು ಹಾಕಲೇಬೇಕು. ಇಲ್ಲದೇ ಇದ್ದರೆ ದೊಡ್ಡ ಪ್ರಮಾಣದ ದಂಡ ಬೀಳುತ್ತದೆ. ಗ್ರಾಹಕರಿದ್ದರೂ ಅನಿವಾರ್ಯವಾಗಿ ಅವರನ್ನು ಹೊರಗೆ ಕಳುಹಿಸಿ, ಬಾಗಿಲು ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

‘ಇದೀಗ ನಾವು ಕಡ್ಡಾಯವಾಗಿ 11 ಗಂಟೆಗೆ ಬಾರ್ ಬಾಗಿಲು ಮುಚ್ಚಬೇಕು. ಆದರೆ ಅನೇಕ ಬಾರಿ ಅರೆಕುಡಿದ ಗ್ರಾಹಕರು ನಾವು ಎಷ್ಟೇ ಎಚ್ಚರಿಕೆ ಕೊಟ್ಟರೂ ಹೊರ ಹೋಗುವುದೇ ಇಲ್ಲ. ನಶೆಯಲ್ಲಿ ನಮ್ಮೊಂದಿಗೆ ಗಲಾಟೆಗೆ ಬರುತ್ತಾರೆ. ಸರಿಯಾದ ಸಮಯಕ್ಕೆ ಬಾಗಿಲು ಬಂದ್ ಮಾಡದಿದ್ದರೆ ಅಧಿಕಾರಿಗಳು ಎಲ್ಲಿ ಬೀಗ ಹಾಕುತ್ತಾರೋ ಎನ್ನುವ ಭಯ ನಮಗೆ. ಸದ್ಯ ಉಪ ಚುನಾವಣೆ ಮುಗಿಯುವವರೆಗೆ ಇಕ್ಕಟ್ಟಿನ ಪರಿಸ್ಥಿತಿ ಇರುತ್ತದೆ’ ಎಂದು ಬಾರ್ ಮಾಲೀಕ ವಿನಯ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.