ADVERTISEMENT

ಚಿಂತಾಮಣಿ: ರಸ್ತೆ ಬದಿಯಲ್ಲಿ ಮಾರಾಟ ಜೋರು

ಎಂ.ರಾಮಕೃಷ್ಣಪ್ಪ
Published 15 ಜನವರಿ 2026, 6:58 IST
Last Updated 15 ಜನವರಿ 2026, 6:58 IST
ಚಿಂತಾಮಣಿಯಲ್ಲಿ ಬುಧವಾರ ಜೋಡಿ ರಸ್ತೆಯಲ್ಲಿ ಮಾರಾಟಕ್ಕೆ ಬಂದಿರುವ ಕಬ್ಬಿನ ರಾಶಿ
ಚಿಂತಾಮಣಿಯಲ್ಲಿ ಬುಧವಾರ ಜೋಡಿ ರಸ್ತೆಯಲ್ಲಿ ಮಾರಾಟಕ್ಕೆ ಬಂದಿರುವ ಕಬ್ಬಿನ ರಾಶಿ   

ಚಿಂತಾಮಣಿ: ಸುಗ್ಗಿಯ ಹಬ್ಬ ಸಂಕ್ರಾಂತಿ ಆಚರಣೆಗೆ ಬುಧವಾರ ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಮಾರುಕಟ್ಟೆ ಮತ್ತು ರಸ್ತೆಬದಿಯಲ್ಲಿ ಕಬ್ಬು, ಅವರೆಕಾಯಿ, ಗೆಣಸು, ಕಡಲೆಕಾಯಿ ರಾಶಿಗಳು ಕಂಡುಬಂದವು.

ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮಳೆ ಬೆಳೆಯಾಗಿದ್ದು ಸಂಭ್ರಮದಿಂದ ಸುಗ್ಗಿಯ ಹಬ್ಬ ಸಂಕ್ರಾಂತಿಗೆ ಸಿದ್ಧತೆ ನಡೆಯಿತು. ನಗರದ ಐ.ಡಿ.ಎಸ್.ಎಂ.ಟಿ ಕಾಂಪ್ಲೆಕ್ಸ್, ಜೋಡಿ ರಸ್ತೆ, ಗುರುಭವನದ ಮುಂಭಾಗ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಜನಜಂಗುಳಿಯೇ ಕಂಡುಬಂತು. ಹೂ ಹಣ್ಣು, ಕಬ್ಬಿನ ಜಲ್ಲೆ, ಎಳ್ಳು ಬೆಲ್ಲ, ಕಡಲೆಕಾಯಿ, ಅವರೆಕಾಯಿ ಅಧಿಕವಾಗಿ ಮಾರಾಟವಾಯಿತು.

ಎಳ್ಳು, ಬೆಲ್ಲ, ಒಣಕೊಬ್ಬರಿ, ಕಡ್ಲೆಬೀಜ, ಹುರಿಗಡಲೆ ಕಬ್ಬು ಸಕ್ಕರೆ ಅಚ್ಚು ವಿಶ್ರ ಮಾಡಿ ಬಂಧು ಬಳಗ, ಸ್ನೇಹಿತರು, ನೆರೆಹೊರೆಯವರಿಗೆ ಹಂಚುವುದನ್ನು ಎಳ್ಳು ಬೀರುವುದು ಎಂದು ಕರೆಯುತ್ತಾರೆ. ಇತ್ತೀಚೆಗೆ ಬಹುತೇಕರು ಅಂಗಡಿಗಳಲ್ಲಿ ದೊರೆಯುವ ಎಳ್ಳು-ಬೆಲ್ಲ ಖರೀದಿಸಿ ಹಬ್ಬ ಆಚರಿಸುತ್ತಾರೆ ಎಂದು ಗೃಹಿಣಿ ಮಂಜುಳಾ ತಿಳಿಸಿದರು.

ADVERTISEMENT

ಅವರೆಕಾಯಿ ಮತ್ತು ಹೂಗಳ ಬೆಲೆ ತುಸು ಕಡಿಮೆಯಾಗಿದ್ದು ಉಳಿದ ಎಲ್ಲ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಒಣಕೊಬ್ಬರಿ ಬೆಲೆ ಗಗನಕ್ಕೇರಿದೆ. ಪಚ್ಚಬಾಳೆ ಕೆ.ಜಿಗೆ ₹40-50, ಏಲಕ್ಕಿ ₹100-110, ಕಿತ್ತಳೆ ₹100-120, ಸೇವಂತಿಗೆ ₹80-100, ಗುಲಾಬಿ ಹೂ ₹120-150, ಸುಗಂಧರಾಜ ₹70-80, ಕನಕಾಂಬರ ₹800, ಮಲ್ಲಿಗೆ ₹1500-2000, ಅವರೆಕಾಯಿ ₹40-50, ಸಿಹಿಗೆಣಸು ₹50-60, ಕಡಲೆಕಾಯಿ ₹100-120, ಎಳ್ಳು-ಬೆಲ್ಲ ಮಿಶ್ರಣ ₹300-350, ಸಕ್ಕರೆ ಅಚ್ಚು ₹250-300. ಕಬ್ಬು ₹50-60ಕ್ಕೆ ಮರಾಟವಾಯಿತು.

ಅವರೆಕಾಯಿ ಮತ್ತು ಸೇವಂತಿಗೆ ಮಾತ್ರ ಕೈಗೆಟುಕುವ ಬೆಲೆಯಲ್ಲಿದೆ. ಉಳಿದ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ವರ್ಷ ಬೆಳೆಗಳಿಗೆ ಅಗತ್ಯವಾದ ಮಳೆಯಾಗಿದ್ದು ಬೆಳೆಗಳು ಉತ್ತಮವಾಗಿ ಬೆಳೆದಿದ್ದವು. ರೈತರು ಸುಗ್ಗಿಯಲ್ಲಿ ತಮ್ಮ ಉತ್ಪನ್ನಗಳನ್ನು ಮನೆ ತುಂಬಿಸಿಕೊಂಡಿದ್ದಾರೆ. ಸುಗ್ಗಿಯ ಹಬ್ಬ ಸಂಕ್ರಾಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ ಎಂದು ರೈತ ಮಹಿಳೆ ಸುಜಾತ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.