ADVERTISEMENT

‘ಸತ್ಯಸಾಯಿ ಗ್ರಾಮದ ಕಾರ್ಯ ಸಮಾಜಕ್ಕೆ ಮಾದರಿ’

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:14 IST
Last Updated 28 ಸೆಪ್ಟೆಂಬರ್ 2025, 6:14 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಸದ್ಗುರು ಮಧುಸೂದನ ಸಾಯಿ ಅವರು ಬಿ.ಎಲ್.ಸಂತೋಷ್ ಅವರಿಗೆ ಸ್ಮರಣಿಕೆ ನೀಡಿದರು
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಸದ್ಗುರು ಮಧುಸೂದನ ಸಾಯಿ ಅವರು ಬಿ.ಎಲ್.ಸಂತೋಷ್ ಅವರಿಗೆ ಸ್ಮರಣಿಕೆ ನೀಡಿದರು   

ಚಿಕ್ಕಬಳ್ಳಾಪುರ: ‘ಕೆರೆಯ ನೀರನು ಕೆರೆಗೆ ಚೆಲ್ಲು’ ಎನ್ನುವುದಕ್ಕೆ ಸತ್ಯಸಾಯಿ ಗ್ರಾಮವು ಮಾದರಿ. ಸಮಾಜದಿಂದ ಪಡೆದುಕೊಂಡಿದ್ದನ್ನು ಇಲ್ಲಿನ ವಿದ್ಯಾರ್ಥಿಗಳು, ಸಾಧಕರು ಮತ್ತಷ್ಟು ಸೇರಿಸಿ ಸಮಾಜಕ್ಕೆ ವಾಪಸ್ ಕೊಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ಶನಿವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಳ್ಳೆಯದನ್ನು ಮಾಡುವವರಿಗೆ ಭಗವಂತ ಸದಾ ಸಹಕಾರಿಗಳನ್ನು ಕೊಡುತ್ತಾನೆ. ಮಧ್ಯಾಹ್ನದ ಬಿಸಿಯೂಟ, ಬೆಳಗಿನ ಉಪಾಹಾರ ಇಂದು ದೇಶದಾದ್ಯಂತ ಜಾರಿಯಾಗಿದೆ. ಸರ್ಕಾರವು ಅನ್ನ ದಾಸೋಹ ಆರಂಭಿಸುವ ಮೊದಲು ಸಿದ್ದಗಂಗಾ ಮಠ, ಶೃಂಗೇರಿ ಮಠ, ಪೇಜವಾರ, ಚಿತ್ರದುರ್ಗ, ಕೊಪ್ಪಳ ಮಠಗಳು ಆರಂಭಿಸಿದ್ದವು ಎಂದರು.

ADVERTISEMENT

ಸತ್ಯಸಾಯಿ ಗ್ರಾಮದಲ್ಲಿ ಯಾವುದೇ ಚಟುವಟಿಕೆ ಬಹಳ ಬೇಗ ಜರುಗುತ್ತಿದೆ. ಒಂದು ಯಂತ್ರವನ್ನು ಇಲ್ಲಿ ಸ್ಥಾಪಿಸಿ ಚಾಲನೆಗೊಳಿಸಲು 40 ದಿನ ಆಗಬೇಕಿತ್ತು. ಆದರೆ ಇಲ್ಲಿ ಕೇವಲ 10 ದಿನಗಳಲ್ಲಿ ಅದು ಚಾಲನೆಗೊಂಡಿತು. ವೈದ್ಯಕೀಯವಾಗಿ ಉಪಯೋಗಿಸಲೂ ಆರಂಭಿಸಿದ್ದೇವೆ ಎಂದು ವೈದ್ಯರು ಹೇಳಿದರು. ಸದ್ಗುರುಗಳ ಆಶೀರ್ವಾದದ ಶಕ್ತಿಯಿಂದ ಇವೆಲ್ಲವೂ ನಡೆಯುತ್ತಿದೆ ಎಂದು ಪ್ರಶಂಸಿಸಿದರು.

ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಭಗವಾನ್ ಸತ್ಯ ಸಾಯಿಬಾಬಾ ಅವರ ಆಶೀರ್ವಾದ, ಸ್ಮೃತಿ ಇದ್ದೇ ಇರುತ್ತದೆ. ಈ ಕ್ಯಾಂಪಸ್‌ಗೆ ಸತ್ಯಸಾಯಿ ಬಾಬಾ 29 ಸಲ ಬಂದಿದ್ದರು ಎಂದು ನನ್ನ ಜೊತೆಗಿದ್ದವರು ಹೇಳುತ್ತಿದ್ದರು. ಇಂದಿಗೂ ಅವರು ಇಲ್ಲಿ ಇದ್ದಾರೆ ಎನಿಸುತ್ತದೆ. ನಿಧಾನವಾಗಿ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಸಂಸ್ಥೆಯ ಕಾರ್ಯಚಟುವಟಿಕೆಗಳು ತೆರೆದುಕೊಳ್ಳುತ್ತಿವೆ ಎಂದು ಹೇಳಿದರು. 

ಡಿ.ವಿ.ಗುಂಡಪ್ಪ ಅವರ ‘ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ...’ ಎನ್ನುವ ಈ ಸಾಲುಗಳು ಇಲ್ಲಿ ಸಾಕಾರವಾಗಿವೆ. ಸದ್ಗುರು ಮಧುಸೂದನ ಸಾಯಿ ಅವರು ಅದೇ ಆಶಯವನ್ನು ಇಲ್ಲಿ ಸಾಕಾರಗೊಳಿಸಿದ್ದಾರೆ ಎಂದು ಪ್ರಶಂಸಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.