ADVERTISEMENT

ಗೌರಿಬಿದನೂರು: ಹೈನುಗಾರಿಕೆ ಉಳಿಸಿ ರೈತರ‌ನ್ನು ಬೆಳೆಸಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 4:22 IST
Last Updated 15 ನವೆಂಬರ್ 2021, 4:22 IST
ಭಾನುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ‌ಗೌರಿಬಿದನೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ‌ ಭಾಗವಹಿಸಿದ್ದ ಮುಖಂಡರಾದ ಸಣ್ಣಕ್ಕಿ‌ ವೆಂಕಟರವಣಪ್ಪ, ಮಾಳಪ್ಪ, ಲೋಕೇಶ್ ಗೌಡ, ಪ್ರಭಾಕರ್, ಕಲಾವತಿ, ಅಶ್ವತ್ಥನಾರಾಯಣ
ಭಾನುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ‌ಗೌರಿಬಿದನೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ‌ ಭಾಗವಹಿಸಿದ್ದ ಮುಖಂಡರಾದ ಸಣ್ಣಕ್ಕಿ‌ ವೆಂಕಟರವಣಪ್ಪ, ಮಾಳಪ್ಪ, ಲೋಕೇಶ್ ಗೌಡ, ಪ್ರಭಾಕರ್, ಕಲಾವತಿ, ಅಶ್ವತ್ಥನಾರಾಯಣ   

ಗೌರಿಬಿದನೂರು: ನೊಂದ ಹಾಲು ಉತ್ಪಾದಕರ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಭಾನುವಾರ ಹಾಲು ಉತ್ಪಾದಕರ ಬೇಡಿಕೆಗಳ ಕುಂದುಕೊರತೆಗೆ ಸಂಬಂಧಿಸಿದಂತೆ ಸಭೆ ನಡೆಯಿತು.

ರೈತ ಮುಖಂಡ ಮಾಳಪ್ಪಮಾತನಾಡಿ, ಈಚೆಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯಾಗಿ ನೂತನ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವಾಗಿರುವುದು ಸಂತಸದ ವಿಚಾರ. ಆದರೆ ರೈತರಿಗೆ ಹಾಲಿನ ದರದಲ್ಲಿ ₹29 ರಿಂದ ₹24ಕ್ಕೆ ಇಳಿಸಿರುವುದು ಹೈನುದಾರರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ ಎಂದರು.

ತಾಲ್ಲೂಕಿನ ಎಲ್ಲ ಹೈನುದಾರರು ಹಾಗೂ ಹಾಲು ಉತ್ಪಾದಕರ ಸಂಘದ ನಿರ್ದೇಶಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ರೈತರಿಗೆ ಮತ್ತು ಹೈನುದಾರರಿಗೆ ಅನ್ಯಾಯ‌ ಮಾಡಲು ಹೊರಟಿರುವ ಹಾಲು ಒಕ್ಕೂಟದ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲು ಮುಂದಾಗುತ್ತೇವೆ ಎಂದು‌ ಹೇಳಿದರು.

ADVERTISEMENT

ರೈತ‌ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ವಿ.ಲೋಕೇಶ್ ಗೌಡ ಮಾತನಾಡಿ, ಹೈನುದಾರರು ನಿತ್ಯ ಸ್ಥಳೀಯ ಸಂಘಗಳಿಗೆ ಗುಣಮಟ್ಟದ ಹಾಲನ್ನು ಪೂರೈಸಲು ಮುಂದಾಗಿದ್ದಾರೆ. ಆದರೆ ಒಕ್ಕೂಟವು ರೈತರ ಹಾಲಿಗೆ ₹ 24 ನಿಗದಿ‌ಮಾಡಿ ಗ್ರಾಹಕರಿಗೆ ಸುಮಾರು ₹ 35ಕ್ಕೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆದು ಒಕ್ಕೂಟದಲ್ಲಿನ ನಿರ್ದೇಶಕರು ತಮ್ಮ ಐಷಾರಾಮಿ ಜೀವನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪಶು ಆಹಾರವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದರೂ, ಹಾಲಿನ ದರದಲ್ಲಿ ಯಾವುದೇ ಏರಿಕೆ ಮಾಡಲು ಒಕ್ಕೂಟ ಮುಂದಾಗಿಲ್ಲ ಎಂದು ದೂರಿದರು.

ನವೆಂಬರ್ 17ರಂದು ನಗರದ ನದಿದಡ ಆಂಜನೇಯ‌ಸ್ವಾಮಿ‌ ದೇವಾಲಯದ ಬಳಿ ಹೈನುದಾರರು ‌ಮತ್ತು ಸ್ಥಳೀಯ ‌ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಸೇರಿ ಚರ್ಚಿಸಿ ಪ್ರತಿಭಟನೆ ‌ಮಾಡಲು ತೀರ್ಮಾನಿಸಲಾಗುವುದು ಎಂದು‌ ಹೇಳಿದರು.

ವಕೀಲ ಸಣ್ಣಕ್ಕಿ ವೆಂಕಟರವಣಪ್ಪ, ರೈತ ಮುಖಂಡ ಸನತ್ ಕುಮಾರ್, ಪ್ರಭಾಕರ್, ಜಿ.ಎಲ್.ಅಶ್ವತ್ಥನಾರಾಯಣ, ದಿಲೀಪ್, ಲೋಕೇಶ್, ಗಂಗಾಧರಪ್ಪ, ಕಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.