ADVERTISEMENT

ಸಂತನ ರೂಪದ ಹೋರಾಟಗಾರ ಸೇವಾಲಾಲ್

ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:40 IST
Last Updated 15 ಫೆಬ್ರುವರಿ 2020, 15:40 IST
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಸಮಾಜದ ಅಂಕುಡೊಂಕು ತಿದ್ದುವ ಜತೆಗೆ ಬಂಜಾರ ಜನಾಂಗದಲ್ಲಿ ಏಕತೆ ಮೂಡಿಸಿದ ಸಂತ ಸೇವಾಲಾಲ್‌ ಅವರ ಬೋಧನೆ ಮತ್ತು ಚಿಂತನೆಗಳು ಇವತ್ತು ನಮಗೆಲ್ಲ ಆದರ್ಶವಾಗಬೇಕಿದೆ’ ಎಂದು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘17ನೇ ಶತಮಾನದಲ್ಲಿ ಧ್ಯಾನ ಮತ್ತು ಭಕ್ತಿ ಮೂಲಕ ಅಧ್ಯಾತ್ಮ ಜೀವಿಯಾಗಿ ಬದುಕಿದ ಸೇವಾಲಾಲ್ ಅವರು ಬುಡಕಟ್ಟು ಸಮುದಾಯದ ಏಳಿಗೆಗೆ ದುಡಿದ ಮಹಾನ್‌ ವ್ಯಕ್ತಿ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಮುಂದಾಗಿದ್ದ ಅವರ ತತ್ವ, ಆದರ್ಶಗಳನ್ನು ಇವತ್ತು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

‘ಇವತ್ತು ಬುಡಕಟ್ಟು ಸಮುದಾಯ ಜನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲಿ ಈ ಸಮುದಾಯದಿಂದ ಬಂದ ಅನೇಕರು ರಾಜಕೀಯದ ಮೂಲಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವತ್ತು ರಾಜ್ಯ ಸರ್ಕಾರ ಸಮಾಜಕ್ಕೆ ಕೊಡುಗೆ ನೀಡಿರುವ ಅನೇಕ ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದರು.

ರೋಣೂರಿನ ಸರ್ಕಾರಿ ಫ್ರೌಢಶಾಲೆಯ ಸಹಶಿಕ್ಷಕ ಟಿ.ವೆಂಕಟರಮಣ ನಾಯಕ್ ಮಾತನಾಡಿ, ‘ತಾಂಡಾಗಳಲ್ಲಿ ವಾಸಿಸುವ ಲಂಬಾಣಿಗರು ತಮ್ಮದೇ ಆದ ವೇಷಭೂಷಣಗಳೊಂದಿಗೆ ಇಂದಿಗೂ ತಮ್ಮ ಸಂಸ್ಕೃತಿ ಕಾಪಿಟ್ಟುಕೊಂಡು ಬಂದಿದ್ದಾರೆ. ಈ ಪಂಗಡದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕಿದೆ. ಸೇವಾಲಾಲ್‌ ಅವರು ಕೇಳವ ಒಂದು ಸಮುದಾಯಕ್ಕೆ ಸೀಮಿತರಾಗಿರಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಹೋರಾಟಗಾರರು ಕೂಡ ಆಗಿದ್ದರು’ ಎಂದು ಹೇಳಿದರು.

‘ದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಆದರೆ, ಇವತ್ತಿಗೂ ಬಂಜಾರು ಸಮುದಾಯದ ವೇಷಭೂಷಣದೊಂದಿಗೆ ತಮ್ಮದೇ ಆದ ಸಂಪ್ರದಾಯಗಳನ್ನು ಉಳಿಸಿಕೊಂಡಿದೆ. ಸಮುದಾಯದ ಪ್ರತಿಯೊಬ್ಬರು ಸಂಘಟನೆಗೆ ಒತ್ತು ನೀಡಬೇಕು.ಈ ಸಮುದಾಯ ಅಭಿವೃದ್ಧಿಯ ಕಡೆ ಸಾಗಬೇಕು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು’ ಎಂದು ತಿಳಿಸಿದರು.

ಲಂಬಾಣಿ ಸಮುದಾಯದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಶಿಡ್ಲಘಟ್ಟದ ವೈದ್ಯಾಧಿಕಾರಿ ಮಂಜಾನಾಯಕ್, ಗ್ರಾಮ ಪಂಚಾಯಿತಿ ಸದಸ್ಯ ಭೀಮಾ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.