ಪೆರೇಸಂದ್ರ (ಚಿಕ್ಕಬಳ್ಳಾಪುರ): ಜ್ಞಾನ, ಕೌಶಲ, ಸಾಮರ್ಥ್ಯಗಳು ಹಾಗೂ ಪರಿಣತಿಯನ್ನು ಶಾಲೆಗಳಲ್ಲಿ ಕಲಿಯಬಹುದು. ಆದರೆ ಕರುಣೆ, ಸಹನೆ ಮತ್ತು ಬದ್ಧತೆಗಳನ್ನು ನಿಸ್ವಾರ್ಥ ಸೇವೆಯ ಮೂಲಕವೇ ಕಟ್ಟಿಕೊಳ್ಳಬೇಕು ಎಂದು ಶಾಂತ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಡಾ. ಪ್ರೀತಿ ಸುಧಾಕರ್ ತಿಳಿಸಿದರು.
ಇಲ್ಲಿನ ಶಾಂತ ಆರೋಗ್ಯ ಹಾಗೂ ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧನೆ ಕಾರ್ಯಕ್ರಮದಲ್ಲಿ ಸೇವಾ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಜಗತ್ತಿನ ಶುಶ್ರೂಷಕ ಸೇವಾ ಕ್ಷೇತ್ರದಲ್ಲಿ ನರ್ಸಿಂಗ್ ಒಂದು ಅಪೂರ್ವ ಸೇವೆಯಾಗಿದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವಾಗುಣ ಮತ್ತು ಸ್ಫೂರ್ತಿಯನ್ನು ಶುಶ್ರೂಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಮಹತ್ವದ ಕಾರ್ಯದ ಯಶಸ್ವಿಗೆ ದೀಪ ಹೊತ್ತಿಸುವುದು ನಮ್ಮ ಪರಂಪರೆಯ ಪ್ರತೀಕವಾಗಿದೆ. ಈ ದೀಪದ ಪ್ರಕಾಶಮಾನವು ನಿಮ್ಮ ಶುಶ್ರೂಷಕ ವೃತ್ತಿಯ ದಾರಿದೀಪವಾಗಿದೆ. ಶುಶ್ರೂಷಕರ ಶ್ವೇತ ಉಡುಪು ಶಾಂತಿ, ಸಹನೆ, ಪ್ರೇಮ, ಸೇವೆ ಹಾಗೂ ವಿಶ್ವಬಂಧುತ್ವದ ಪ್ರತೀಕ ಎಂದು ಹೇಳಿದರು.
ಪ್ರತಿಯೊಬ್ಬ ಶುಶ್ರೂಷಕರಲ್ಲಿ ಇಂತಹ ಮೌಲ್ಯಗಳು ನಿರಂತರ ಬೆಳೆದು ಜೀವಂತವಾಗಿರಲಿ. ವೃತ್ತಿಯ ಸಂಭ್ರಮ ಮತ್ತು ಸಂವೇದನೆಯ ಜೊತೆಗೆ ಬದ್ಧತೆಗಳು ಬಲಗೊಳ್ಳಬೇಕು ಎಂದರು.
ಭಾರತವು ಜಗತ್ತಿನ ನರ್ಸಿಂಗ್ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಗೌರವ ಹೊಂದಿದೆ. ಇಂತಹ ಸೇವಾ ಪರಂಪರೆಯನ್ನು ಇನ್ನೂ ಬಲಪಡಿಸಿ ನೊಂದವರ ಬಾಳಿನಲ್ಲಿ ನೆಮ್ಮದಿ ತರಲಿ ಎಂದು ಹೇಳಿದರು.
ಬೆಂಗಳೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ರಾಮಕೃಷ್ಣ ರೆಡ್ಡಿ ಮಾತನಾಡಿ, ಭಾರತದಲ್ಲಿ ಶುಶ್ರೂಷಕ ಸೇವಾ ಪರಂಪರೆ ಅತ್ಯಂತ ಶ್ರೇಷ್ಠ ಹಾಗೂ ವ್ಯಾಪಕವಾಗಿ ಬೆಳೆದಿದೆ. ಪ್ರತಿಯೊಬ್ಬ ವ್ಯಕ್ತಿಗೂ ನರ್ಸಿಂಗ್ ಮೌಲ್ಯಗಳು ಅಗತ್ಯವಾಗಿವೆ ಎಂದರು.
ಜೀವನ್ ಮತ್ತು ಅನನ್ಯ ಆಸ್ಪತ್ರೆಗಳ ಸಂಸ್ಥಾಪಕ ನಿರ್ದೇಶಕ ಡಾ.ಐ.ಎಸ್ ರಾವ್ ಮಾತನಾಡಿ, ಜಗತ್ತಿನ ವೈದ್ಯಕೀಯ ಸೇವಾ ವ್ಯವಸ್ಥೆಗೆ ಶುಶ್ರೂಷಕರ ಕೊಡುಗೆ ದೊಡ್ಡದು. ಗ್ರಾಮೀಣ ಮತ್ತು ನಗರ ಭಾಗಗಳ ಮತ್ತು ಹಿಂದುಳಿದ ಕುಟುಂಬಗಳ ಹೆಣ್ಣು ಮಕ್ಕಳು ಶಾಂತ ಸಂಸ್ಥೆಯಲ್ಲಿ ನರ್ಸಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಸಾವಿರಾರು ಹೆಣ್ಣು ಮಕ್ಕಳು ತಮ್ಮ ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು.
ಲಲಿತಾ ಮನೋಹರನ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಲಾವಣ್ಯ ಕುಮಾರಿ ಹಾಗೂ ಜೈನ್ ಮಿಷನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಯು. ಜೈನ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳ ಮಾಹಿತಿ ನೀಡಿದರು.
ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರೊ. ಕೋಡಿ ರಂಗಪ್ಪ, ಜೈನ್ ಮಿಷನ್ ಆಸ್ಪತ್ರೆ ವ್ಯವಸ್ಥಾಪಕ ಪ್ರಕಾಶ್ ಜೈನ್, ನರ್ಸಿಂಗ್ ಅಧೀಕ್ಷಕಿ ಮೇರಿ, ಶಾಂತ ಆರೋಗ್ಯ ಮತ್ತು ಅರೆ ವೈದ್ಯಕೀಯ ಶಿಕ್ಷಣ ಕಾಲೇಜಿನ ಮುಖ್ಯಸ್ಥ ಡಾ.ನವೀನ್ ಸೈಮನ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಿನಾಥ್, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಯಾನ, ಶಾಂತಾ ವಿದ್ಯಾನಿಕೇತನದ ಪ್ರಾಂಶುಪಾಲ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.