ADVERTISEMENT

ಶಿಷ್ಯನಿಗೆ ಪಾಠ ಕಲಿಸಲು ಸಿದ್ದರಾಮಯ್ಯ ತಂತ್ರ

ಚಿಕ್ಕಬಳ್ಳಾಪುರ ಉಪಚುನಾವಣೆ: ಸುಧಾಕರ್ ನಾಗಾಲೋಟಕ್ಕೆ ತಡೆ ಒಡ್ಡಲು ಹಳೆಯ ಸ್ನೇಹಿತ ನಂದಿ ಆಂಜನಪ್ಪನಿಗೆ ಟಿಕೆಟ್

ಈರಪ್ಪ ಹಳಕಟ್ಟಿ
Published 1 ನವೆಂಬರ್ 2019, 19:30 IST
Last Updated 1 ನವೆಂಬರ್ 2019, 19:30 IST
   

ಚಿಕ್ಕಬಳ್ಳಾಪುರ: ಅಧಿಕಾರ ಇರುವಾಗ ತನ್ನ ಸುತ್ತಲೇ ಸುಳಿಯುತ್ತ ಹೊಗಳಿ ಅಟ್ಟಕ್ಕೇರಿಸಿ ಕೆಲಸ ಮಾಡಿಸಿಕೊಂಡು, ಆಪತ್ತಿನ ಸಂದರ್ಭದಲ್ಲಿ ಕೈಕೊಟ್ಟು ತನ್ನ ರಾಜಕೀಯ ಕಡುವೈರಿಗಳ ಸಖ್ಯ ಬೆಳೆಸಿದ ಶಿಷ್ಯರಿಗೆ ಬುದ್ಧಿ ಕಲಿಸಲು ಮುಂದಾಗಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಇದೀಗ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ತಮ್ಮ ಶಿಷ್ಯೋತ್ತಮರ ಪೈಕಿ ಒಬ್ಬರಾದ ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರನ್ನು ಮಣಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಅಳೆದು ತೂಗಿ ತಮ್ಮ ಹಳೆಯ ಮಿತ್ರ ನಂದಿ ಆಂಜನಪ್ಪ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಿದ್ದರಾಮಯ್ಯ ಅವರ ಜತೆಗಿರುವಷ್ಟು ದಿನ ಸುಧಾಕರ್ ಅವರು ‘ಜಿಲ್ಲೆಗೆ ಹಿಂದೆ ಅಧಿಕಾರದಲ್ಲಿದ್ದವರು ನೀರಾವರಿ ಯೋಜನೆಗಳಿಗೆ ಒಂದೇ ಒಂದು ನಯಾ ಪೈಸೆ ತರುವ ಪ್ರಯತ್ನ ಮಾಡಿಲ್ಲ. ಆದರೆ, ಸಿದ್ದರಾಮಯ್ಯನವರು ₹13 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ, ₹947 ಕೋಟಿ ವೆಚ್ಚದ ಎಚ್‌.ಎನ್.ವ್ಯಾಲಿ ಹೀಗೆ ಎರಡು ಬೃಹತ್‌ ನೀರಾವರಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದ್ದಾರೆ’ ಎಂದು ಹೊಗಳುತ್ತ ಬಂದಿದ್ದರು.

ADVERTISEMENT

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಬಿಜೆಪಿ ಕೋಮುವಾದಿ ಪಕ್ಷ ಎಂದು ಮೊದಲುಗೊಂಡು ವಾಚಾಮಗೋಚರವಾಗಿ ಕೇಸರಿ ಪಾಳೆಯವನ್ನು ತೆಗಳಿದ್ದ ಸುಧಾಕರ್ ಅವರು, ಇದೀಗ ಬದಲಾದ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರ ಜಪ ಆರಂಭಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ವೈದ್ಯಕೀಯ ಕಾಲೇಜು ಮತ್ತು ಮಂಚೇನಹಳ್ಳಿ ತಾಲ್ಲೂಕು ರಚನೆ ಬೇಡಿಕೆಗಳನ್ನು ಈಡೇರಿಸಿಕೊಂಡ ಸುಧಾಕರ್ ಅವರು ಮೂರನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ‌

ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ಸುಧಾಕರ್ ಅವರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎನ್ನುತ್ತಾರೆ ಅವರ ಆಪ್ತರು. ತಮಗೆ ‘ವಿಶ್ವಾಸಘಾತ’ ಮಾಡಿರುವ ಸುಧಾಕರ್ ಅವರನ್ನು ಶತಾಯಗತಾಯ ಸೋಲಿಸಬೇಕು ಎಂದು ನಿರ್ಧರಿಸಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪೈಕಿ ಪ್ರಬಲ ಹುರಿಯಾಳು ಆಗಬಲ್ಲ ಆಂಜನಪ್ಪ ಅವರಿಗೆ ಧೈರ್ಯ ತುಂಬಿ ಕಣಕ್ಕಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾಲ್ಲೂಕಿನ ನಂದಿ ಗ್ರಾಮದ ಆಂಜನಪ್ಪ ಅವರು, 1980ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡು, ದೇವರಾಜ ಅರಸು ಅವರ ಗರಡಿಯಲ್ಲಿ ಪಳಗಿದವರು. ಹೀಗಾಗಿ, ಮೊದಲಿನಿಂದಲೂ ಸಿದ್ದರಾಮಯ್ಯ ಮತ್ತು ಆಂಜನಪ್ಪ ಅವರು ಉತ್ತಮ ಸ್ನೇಹಿತರು ಎನ್ನಲಾಗಿದೆ.

ಸುಧಾಕರ್ ಮತ್ತು ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರ ಮತಗಳ ವಿಭಜನೆಯ ಲೆಕ್ಕಾಚಾರದಲ್ಲಿ ಅದೇ ಸಮುದಾಯಕ್ಕೆ ಸೇರಿದ ಆಂಜನಪ್ಪ ಅವರನ್ನು ಸಿದ್ದರಾಮಯ್ಯ ಅವರು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಆಂಜನಪ್ಪ ಅವರು 1989ರಲ್ಲಿ ಯುವ ಕಾಂಗ್ರೆಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, 2009 ರಿಂದ 2015ರ ವರೆಗೆ ಕಾಂಗ್ರೆಸ್ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕೊನೆಯ ಕ್ಷಣದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್‌ ನೀಡಿದ್ದು ಪ್ರಬಲ ಆಕಾಂಕ್ಷಿಯಾಗಿದ್ದ ಆಂಜನಪ್ಪ ಅವರನ್ನು ಕೆರಳಿಸಿತ್ತು.

ಬಳಿಕ, ನಾಯಕರ ಧೋರಣೆಗೆ ಬೇಸತ್ತು ಆಂಜನಪ್ಪ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡು, ಜೆಡಿಎಸ್ ಬೆಂಬಲಿಸಿದ್ದರು. ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಘೋಷಿಸುತ್ತಿದ್ದಂತೆ ಕ್ಷೇತ್ರದಲ್ಲಿ ಆಂಜನಪ್ಪ ಸೇರಿದಂತೆ ಅನೇಕ ನಾಯಕರು ಪಕ್ಷಕ್ಕೆ ವಾಪಸಾಗಿ ಒಗ್ಗಟ್ಟಿನಿಂದ ಸುಧಾಕರ್ ಅವರನ್ನು ಸೋಲಿಸುವ ಶಪಥ ಮಾಡಿದ್ದಾರೆ. ಫಲಿತಾಂಶ ಏನಾಗುವುದೋ ಕಾಯ್ದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.