ADVERTISEMENT

ಚಿಕ್ಕಬಳ್ಳಾಪುರ: ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:55 IST
Last Updated 15 ಜನವರಿ 2026, 6:55 IST
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ಸಮಾಜದಲ್ಲಿನ ಜಾತಿ ಶ್ರೇಣೀಕರಣದ ಅಂಕುಡೊಂಕುಗಳನ್ನು ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕೆ ಕ್ರಾಂತಿಯ ಮುನ್ನುಡಿ ಶರಣರು ಬರೆದಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಮಾತನಾಡಿದರು.

ಕರ್ನಾಟಕದ ಚರಿತ್ರೆಯಲ್ಲಿ 12ನೇ ಶತಮಾನದಲ್ಲಿ ಕನ್ನಡದಲ್ಲಿ ವಚನ ಸಾಹಿತ್ಯ ರಚಿಸಿ ಒಂದು ವೈಚಾರಿಕ ಕ್ರಾಂತಿಯನ್ನೇ ಸೃಷ್ಟಿಸಿ ಜನರಲ್ಲಿ ಜಾಗೃತಿ ಮೂಡಿಸಿತು. ಬಸವಣ್ಣನವರ ನಾಯಕತ್ವದಲ್ಲಿ ಅನೇಕ ಸಮುದಾಯಗಳಿಗೆ ಸೇರಿದ ಶಿವಶರಣರು ಭವ್ಯ ಕರ್ನಾಟಕದ ಕನಸಿನ ಬೀಜ ಬಿತ್ತಿದರು. ಅನೇಕ ತಾರತಮ್ಯ, ವೈರುಧ್ಯ ಮತ್ತು ಸಂಘರ್ಷಗಳಲ್ಲಿ ಸಮಾನತೆ ತಂದುಕೊಡಲು ಅಂದೇ ನಾಂದಿಯಾಡಿದ್ದರು. ಇಡೀ ವಿಶ್ವಕ್ಕೆ ಗುರುವಾಗಿ ಸಮಾನತೆಯ ಗುರುಪರಂಪರೆಯನ್ನು ಶರಣರ ನೇತೃತ್ವದಲ್ಲಿ ಹಾಕಿಕೊಟ್ಟದ್ದು ಕರ್ನಾಟಕ ಎಂಬುದು ಹೆಮ್ಮೆಪಡುವ ವಿಷಯ ಎಂದರು.

ADVERTISEMENT

ಶಿವಯೋಗಿ ಸಿದ್ಧರಾಮೇಶ್ವರರು ಸುಮಾರು 60 ಸಾವಿರ ವಚನ ರಚಿಸಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಸುಮಾರು 1200 ವಚನ ದೊರೆತಿವೆ. ಈ ವಚನಗಳಲ್ಲಿರುವ ಸಂದೇಶ, ವೈಚಾರಿಕತೆ, ಮೌಲ್ಯಗಳನ್ನು ಪ್ರತಿಯೊಬ್ಬರೂ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದು ಪ್ರಧಾನವಾಗುತ್ತದೆ ಎಂದರು.

ಜಯಂತಿಗಳನ್ನು ಆಚರಣೆಗಳಿಗೆ ಸೀಮಿತಗೊಳಿಸದೆ ಮಹಾನ್ ವ್ಯಕ್ತಿಗಳು, ಚಿಂತಕರು ತೋರಿದ ಮಾರ್ಗದಲ್ಲಿ ಪ್ರಾಮಾಣಿಕವಾಗಿ ಸಾಗುವ ಕೆಲಸವಾಗಬೇಕು. ಆಗ ಮಾತ್ರ ಮಹನೀಯರ ಜಯಂತಿಗಳು ಹಾಗೂ ಕಾರ್ಯಕ್ರಮ ಸಾರ್ಥಕವಾಗುತ್ತವೆ. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಮತ್ತು ಭವಿಷ್ಯದ ಪೀಳಿಗೆಯ ಸಾಮಾಜಿಕ ಉನ್ನತಿಗೆ ವಚನಕಾರರ ಸಂದೇಶಗಳು ಅಗತ್ಯವಿವೆ ಎಂದು ಪ್ರತಿಪಾದಿಸಿದರು.

ವಿದ್ಯಾರ್ಥಿಗಳು ಹಾಗೂ ಯುವಜನರು ವಚನಕಾರರ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸನ್ಮಾರ್ಗದಲ್ಲಿ ನಡೆದು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಸಿದ್ದರಾಮೇಶ್ವರರ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿಯಲ್ಲಿ ವಿವಿಧ ಜನಪದ ಮತ್ತು ಸಾಂಸ್ಕೃತಿಕ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಜಾನಪದ ಕಲಾತಂಡಗಳ ಜತೆ ಮೆರವಣಿಗೆ ಮಾಡಲಾಯಿತು. ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ತಹಶೀಲ್ದಾರ್ ರಶ್ಮಿ, ಉಪ ಕಾರ್ಯದರ್ಶಿ ಅತೀಕ್‌ಪಾಷಾ, ಚಂದ್ರಶೇಖರ ಸ್ವಾಮೀಜಿ, ಬಂಗಾರು ರಂಗನಾಥ ಸ್ವಾಮೀಜಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮುನಿರಾಜು, ಶಂಕರ್, ವಿಜಯಕುಮಾರ್, ವೆಂಕಟರಮಣಪ್ಪ, ನಾರಾಯಣಸ್ವಾಮಿ, ಡಿ.ಎಂ ರವಿಕುಮಾರ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಗಣ್ಯರು ಉದ್ಘಾಟನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.