ADVERTISEMENT

ಗೌರಿಬಿದನೂರು| ಪಾದಚಾರಿ ಮಾರ್ಗದ ಗ್ರಿಲ್‌: ಅಪಾಯಕ್ಕೆ ಆಹ್ವಾನ

ಗೌರಿಬಿದನೂರು: ಕಿತ್ತುಬಂದ ಫುಟ್‌ಪಾತ್‌ ಟೈಲ್ಸ್‌: ದುರಸ್ತಿಗೆ ಅಧಿಕಾರಿಗಳ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 5:09 IST
Last Updated 27 ಮಾರ್ಚ್ 2023, 5:09 IST
ನಗರದ ಬಿ.ಎಚ್ ರಸ್ತೆಯ ಪಾದಚಾರಿ ಮಾರ್ಗದ ಸ್ಥಿತಿ
ನಗರದ ಬಿ.ಎಚ್ ರಸ್ತೆಯ ಪಾದಚಾರಿ ಮಾರ್ಗದ ಸ್ಥಿತಿ   

ಗೌರಿಬಿದನೂರು: ನಗರದ ಬಿ.ಎಚ್ ಮುಖ್ಯ ರಸ್ತೆಯ ಎರಡೂ ಬದಿಯ ರಸ್ತೆ ವಿಸ್ತರಣೆ ಬಳಿಕ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾಗಿದ್ದ ಪಾದಚಾರಿ ಮಾರ್ಗದ ಟೈಲ್ಸ್ ಮತ್ತು ಕಬ್ಬಿಣದ ಗ್ರಿಲ್ ಕಿತ್ತು ಬಂದಿದ್ದರೂ, ಅವುಗಳ ದುರಸ್ತಿಗೆ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ.

ಇದರಿಂದ ಸಾರ್ವಜನಿಕರು ಎಚ್ಚರದಿಂದಲೇ ಓಡಾಡಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ನಗರದ ಮುಖ್ಯ ರಸ್ತೆ ವಿಸ್ತರಣೆ ಬಳಿಕ ವಾಹನಗಳ ದಟ್ಟಣೆ ಅಧಿಕವಾಗಿತ್ತು. ಇದರಿಂದಾಗಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಎರಡೂ ಬದಿಯಲ್ಲಿ ಸುಮಾರು 4 ಅಡಿಯಷ್ಟು ಪಾದಚಾರಿ ರಸ್ತೆ ನಿರ್ಮಿಸಿ, ಕಬ್ಬಿಣದ ‌ಗ್ರಿಲ್ ಮತ್ತು ಪಾರ್ಕಿಂಗ್ ಟೈಲ್ಸ್ ಅಳವಡಿಸಲಾಗಿತ್ತು. ಆದರೆ ಕಾಮಗಾರಿ ಮುಗಿದ ಒಂದೆರಡು ವರ್ಷಗಳಲ್ಲೇ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಗರಸಭೆ ನಿರ್ಮಿಸಿರುವ ಪಾದಚಾರಿ ರಸ್ತೆ ಮೇಲಿನ ಕಬ್ಬಿಣದ ಗ್ರಿಲ್ ಮತ್ತು ಟೈಲ್ಸ್ ಶಿಥಿಲಗೊಂಡಿವೆ. ಗ್ರೀಲ್‌ಗಳು
ಬೇರ್ಪಟ್ಟಿವೆ.

ADVERTISEMENT

ನಗರಸಭೆ ಅಧಿಕಾರಿಗಳು ವೈಜ್ಞಾನಿಕವಾಗಿ ಕಬ್ಬಿಣದ ಗ್ರಿಲ್ ಅಳವಡಿಸಿ ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ರಕ್ಷಣೆ ನೀಡಿದ್ದರು. ಆದರೆ ರಸ್ತೆ ಬದಿಯಲ್ಲಿ ಸ್ಥಳೀಯ ಅಂಗಡಿ‌ ಮಾಲೀಕರು ತಮ್ಮ ಅಂಗಡಿ ಮುಂಭಾಗ ಮನಸೋ ಇಚ್ಚೆಯಾಗಿ ಗ್ರಿಲ್ ಕತ್ತರಿಸಿ ವ್ಯಾಪಾರ ವಹಿವಾಟು ಮತ್ತು ಗ್ರಾಹಕರ ಓಡಾಟಕ್ಕೆ ಅನುವು ಮಾಡಿಕೊಂಡಿದ್ದಾರೆ. ಇದರಿಂದ ಅವರ ವ್ಯಾಪಾರ ಸುಗಮವಾಗಿದೆ. ಆದರೆ ಸಂಚಾರ ವ್ಯವಸ್ಥೆಗೆ ದಕ್ಕೆ ತಂದಿತ್ತು. ಅಪಾಯ ಆಹ್ವಾನಿಸುತ್ತಿದೆ.

ಕತ್ತರಿಸಿದ ಗ್ರಿಲ್‌ಗಳನ್ನು ರಸ್ತೆ ಬದಿಯಲ್ಲಿ ಹಾಗೂ ನೆರೆಯ ಪ್ರದೇಶಗಳಲ್ಲಿ ಬಿಸಾಡಿದ್ದಾರೆ. ಈ ಬಗ್ಗೆ ಕ್ರಮ ವಹಿಸಬೇಕಿದ್ದ ಅಧಿಕಾರಿಗಳು ಮೌನಕ್ಕೆ
ಶರಣರಾಗಿದ್ದಾರೆ.

ಈ ಬಗ್ಗೆ ಅನೇಕ ಬಾರಿ ನಾಗರೀಕರು ಪ್ರಶ್ನಿಸಿದರೂ ಕೂಡ ಅಧಿಕಾರಿಗಳಿಂದ ಯಾವುದೇ ಪ್ರತ್ಯುತ್ತರ ದೊರೆತಿಲ್ಲ. ನಗರೋತ್ಥಾನ ಅನುದಾನದಡಿಯಲ್ಲಿ ನಗರದ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗುತ್ತಿದ್ದರೂ ಕೂಡ ಪಾದಚಾರ ರಸ್ತೆ ಬದಿಯಲ್ಲಿನ ಗ್ರಿಲ್ ದುರಸ್ತಿಗೊಳಿಸಿ ನಾಗರೀಕರ ನೆಮ್ಮದಿಯ ಸಂಚಾರಕ್ಕೆ ಅನುವು ಮಾಡಲು ಅಧಿಕಾರಿಗಳ ನಿರಾಸಕ್ತಿವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುಜರಿ ಸೇರುತ್ತಿರುವ ಕಬ್ಬಿಣದ ಗ್ರಿಲ್: ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ಗಳು ಕಳಪೆ ಗುಣಮಟ್ಟದಿಂದ ಕಳಚಿ ಬೀಳುತ್ತಿವೆ. ಇವು ಗುಜರಿ
ಅಂಗಡಿಗಳಿಗೆ ಸೇರುತ್ತಿವೆ. ಅಧಿಕಾರಿಗಳನ್ನು ಇದನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸಾರ್ವಜನಿಕ ಸ್ವತ್ತನ್ನು ಉಳಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.

ಅವೈಜ್ಞಾನಿಕ ಮರು ಡಾಂಬರೀಕರಣ: ನಗರದ ಬಿ.ಎಚ್.ರಸ್ತೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯವರೆಗೆ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ರಸ್ತೆಯ ಮೇಲೆ ಪುನಃ ಅವೈಜ್ಞಾನಿಕವಾಗಿ ಇತ್ತೀಚೆಗೆ ಸುಮಾರು ₹4 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗಿದೆ. ಚುನಾವಣಾ ಪೂರ್ವದಲ್ಲಿ ನಡೆದ ಈ ಕಾಮಗಾರಿಯು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಗೂ ಗುತ್ತಿಗೆದಾರರ ತಂತ್ರದಿಂದ ಗುಣಮಟ್ಟ ಇಲ್ಲದೆ, ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ ಎನ್ನುವುದು ಸ್ಥಳೀಯರ ದೂರು. ಇದನ್ನು ಮೇಲಾಧಿಕಾರಿಗಳು ತನಿಖೆ ಮಾಡಿಸಬೇಕೆಂದು ಸಾರ್ವಜನಿಕರ ಆಗ್ರಹ.

ನಗರೋತ್ಥಾನ ಅನುದಾನ ಸದ್ಬಳಕೆಯಾಗಲಿ: ಚುನಾವಣಾ ಸಮಯದಲ್ಲಿ ತರಾತುರಿಯಲ್ಲಿ ನಗರಸಭೆ ಅಧಿಕಾರಿಗಳು ‌ಮತ್ತು ಸದಸ್ಯರು ಸುಮಾರು ₹16 ಕೋಟಿ ವಿಶೇಷ ಅನುದಾನವನ್ನು ನಗರ ಅಭಿವೃದ್ಧಿ ಬಳಸಲು ಅನುಮೋದನೆ ಪಡೆದಿದ್ದಾರೆ. ಇದಕ್ಕೆ ಇತ್ತೀಚೆಗಷ್ಟೇ ಸಚಿವರು, ಶಾಸಕರು ಹಾಗೂ ಅಧ್ಯಕ್ಷರು ಚಾಲನೆ ನೀಡಿದ್ದಾರೆ. ಆದರೆ‌ ನಗರ ವ್ಯಾಪ್ತಿಯಲ್ಲಿ ‌ನಡೆಯುವ ಅಭಿವೃದ್ಧಿ ‌ಕಾರ್ಯಗಳು ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರ ಜೇಬನ್ನು ತುಂಬಿಸುವಂತಿವೆ. ಸ್ಥಳೀಯ ‌ನಾಗರೀಕರಿಗೆ ಅವಶ್ಯ ಮೂಲ ಸೌಕರ್ಯ ಒದಗಿಸಲು ವಿಫಲವಾಗಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ನಿರ್ಮಾಣವಾದ ಒಂದೆರಡು ತಿಂಗಳಿನಲ್ಲೆ ಅದರ ಗುಣಮಟ್ಟ ಪ್ರದರ್ಶನವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.