ADVERTISEMENT

ಪ್ರವಾಸಿ ತಾಣವಾದ ಕುಂದಲಗುರ್ಕಿ ಬೆಟ್ಟ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳ ಸಂಖ್ಯೆ 8ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 3:21 IST
Last Updated 31 ಅಕ್ಟೋಬರ್ 2025, 3:21 IST
ಪ್ರವಾಸಿ ತಾಣವಾಗಿ ಘೋಷಣೆಯಾದ ಕುಂದಲಗುರ್ಕಿ ಬೆಟ್ಟದ ವಿಹಂಗಮ ನೋಟ
ಪ್ರವಾಸಿ ತಾಣವಾಗಿ ಘೋಷಣೆಯಾದ ಕುಂದಲಗುರ್ಕಿ ಬೆಟ್ಟದ ವಿಹಂಗಮ ನೋಟ   

ಶಿಡ್ಲಘಟ್ಟ: ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಮೇಲಿನ ಐತಿಹಾಸಿಕ ವರದಾಂಜನೇಯ ಗುಡಿಯನ್ನು ಪ್ರವಾಸಿ ತಾಣವೆಂದು  ರಾಜ್ಯ ಪ್ರವಾಸೋದ್ಯಮ ಇಲಾಖೆ ಇದೀಗ ಗುರುತಿಸಿದೆ. ಇದರೊಂದಿಗೆ ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣಗಳ ಸಂಖ್ಯೆ ಎಂಟಕ್ಕೇರಿವೆ.

ಕುಂದಲಗುರ್ಕಿ ಬೆಟ್ಟದ ಮೇಲಿನ ವರದಾಂಜನೇಯ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಬೆಟ್ಟದ ಮೇಲಿನ ಗುಡಿಗೆ ಹೋಗಲು ಸುಗಮ ರಸ್ತೆ, ಕುಡಿಯುವ ನೀರು, ನೆರಳು, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಪ್ರವಾಸೋದ್ಯಮ ಇಲಾಖೆಯಿಂದ ಪ್ರಾಪ್ತವಾಗುವ ನಿರೀಕ್ಷೆ ಗರಿಗೆದರಿದೆ. 

ತಾಲ್ಲೂಕಿನಲ್ಲಿ ಪಾಪಾಗ್ನಿ ನದಿ ತಟದ ಮೇಲೆ ನೆಲೆಸಿರುವ ತಲಕಾಯಲಬೆಟ್ಟದ ವೆಂಕಟರಮಣ ದೇವಾಲಯ, ಚಿಕ್ಕದಾಸರಹಳ್ಳಿ ಗುಟ್ಟದ ಮೇಲಿನ ಬ್ಯಾಟರಾಯ  ದೇವಾಲಯ, ಬಶೆಟ್ಟಹಳ್ಳಿ ಬಳಿಯ ರಾಮಲಿಂಗೇಶ್ವರ ಬೆಟ್ಟದ ಮೇಲಿನ ರಾಮಲಿಂಗೇಶ್ವರ ದೇವಾಲಯ, ಸಾದಲಿಯ ಸಾದಲಮ್ಮ ದೇವಿ ದೇವಾಲಯ, ಗಂಗಮ್ಮ ದೇವಾಲಯಗಳಷ್ಟೆ ಅಲ್ಲದೆ, ಸಾದಲಿಯ ರಾಮಸಮುದ್ರ ಕೆರೆ, ಬಂಟೂರು ಬಳಿಯ ಅನಂತ ಪದ್ಮನಾಭ ದೇವಾಲಯವಿರುವ ಒಡೆಯನಕೆರೆಯೂ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 

ADVERTISEMENT

ಇದರೊಂದಿಗೆ ರೇಷ್ಮೆನಾಡು ಎಂದೇ ಪ್ರಖ್ಯಾತವಾದ ಶಿಡ್ಲಘಟ್ಟದಲ್ಲಿ ಶತಮಾನಗಳಷ್ಟು ಇತಿಹಾಸ ಮತ್ತು ಪೌರಾಣಿಕ ಧಾರ್ಮಿಕ ಕೇಂದ್ರ ಮತ್ತು ಕೆರೆ ಕಟ್ಟೆಗಳನ್ನು ಕಾಣಬಹುದು. 

ಪ್ರವಾಸಿ ತಾಣಗಳಾದ ದೇವಾಲಯ, ಕೆರೆ, ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಒಂದಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿದೆ. ಅದೇ ರೀತಿ ಇದೀಗ ಪ್ರವಾಸಿ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದ ಕುಂದಲಗುರ್ಕಿ ಬೆಟ್ಟದ ಮೇಲಿನ ವರದಾಂಜನೇಯ ಗುಡಿಯಲ್ಲೂ ಅಗತ್ಯ ಅಭಿವೃದ್ಧಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

ಸುಂದರ ಪರಿಸರದ ನಡುವಿನ ಬೆಟ್ಟ: ಕುಂದಲಗುರ್ಕಿ ಗ್ರಾಮಕ್ಕೆ ಅಂಟಿಕೊಂಡಂತಿರುವ ಬೆಟ್ಟದ ಮೇಲೆ ವರದಾಂಜನೇಯ ಗುಡಿ ಇದೆ. ಬೆಟ್ಟದ ಮೇಲಿನ ಗುಡಿಗೆ ತೆರಳಲು ಮೆಟ್ಟಿಲುಗಳು ಇವೆ. ದೇವಾಲಯ ತಪ್ಪಲಿನಲ್ಲಿ ಸಮುದಾಯ ಭವನವಿದೆ. ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯಲಿದ್ದು, ನೂರಾರು ಭಕ್ತರು ಸೇರುತ್ತಾರೆ. 

ವಾರದ ಎಲ್ಲ ದಿನಗಳಲ್ಲೂ ನಿತ್ಯ ಪೂಜೆಯೂ ನಡೆಯುತ್ತದೆ. ವರ್ಷದ ಉದ್ದಕ್ಕೂ ಸದಾ ಹಚ್ಚ ಹಸಿರಿನಿಂದ ಕೂಡಿರುವ ಪರಿಸರದ ಮಧ್ಯೆ ಇರುವ ಬೆಟ್ಟದ ಮೇಲೆ ಗುಡಿ ಇದೆ.

ಬೆಟ್ಟ ಹತ್ತಲು ರಸ್ತೆ ಬೇಕು

ಕುಂದಲಗುರ್ಕಿ ಬೆಟ್ಟದ ಮೇಲಿನ ವರದಾಂಜನೇಯ ದೇವಾಲಯವನ್ನು ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣವಾಗಿ ಘೋಷಿಸಿರುವುದು ಖುಷಿ ತಂದಿದೆ. ನೂರಾರು ವರ್ಷಗಳಷ್ಟು ಇತಿಹಾಸವಿರುವ ಈ ತಾಣವನ್ನು ಪ್ರವಾಸಿ ತಾಣವನ್ನಾಗಿ ಘೋಷಿಸುವಂತೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಮುಖ್ಯವಾಗಿ ಬೆಟ್ಟದ ಹತ್ತಲು ರಸ್ತೆ ನಿರ್ಮಾಣವಾಗಬೇಕಿದೆ ಮುನೀಂದ್ರ ಯುವ ಮುಖಂಡ ಕುಂದಲಗುರ್ಕಿ

ಶಾಸನದಲ್ಲಿ ಕುಂದಲಗುರ್ಕಿ ಉಲ್ಲೇಖ

ಕ್ರಿ.ಶ. 810ರ ನಂದಿ ತಾಮ್ರ ಶಾಸನದಲ್ಲಿ ಕುಂದಲಗುರ್ಕಿಯ ಉಲ್ಲೇಖವಿದೆ. ರಾಣಿ ರತ್ನಾವಳಿಯು ಭೋಗನಂದೀಶ್ವರನ ಆಲಯ ಸ್ಥಾಪನೆ ಮಾಡಿಸಿದಾಗ ಅಲ್ಲಿನ ಕಾಳಾಮುಖ ಯತಿ ಈಶ್ವರದಾಸ ಎಂಬಾತನಿಗೆ ಆ ದೇವಾಲಯದ ನಿರ್ವಹಣೆಗಾಗಿ ರಾಷ್ಟ್ರಕೂಟ ಚಕ್ರವರ್ತಿ 3ನೇ ಗೋವಿಂದ ಕುಂದಲಗುರ್ಕಿ ಮತ್ತು ಕನ್ನಮಂಗಲ ಗ್ರಾಮಗಳು ಸೇರಿದಂತೆ ಹಲವು ಪ್ರದೇಶಗಳನ್ನು ದಾನವಾಗಿ ಕೊಟ್ಟಿದ್ದಾನೆ. ಬಾಣವಂಶದ ವಿದ್ಯಾಧರನ ರಾಣಿ ರತ್ನಾವಳಿಯು 3ನೇ ಗೋವಿಂದನ ಅಣ್ಣ ಇಂದ್ರನ ಮಗಳಾಗಿರುವುದರಿಂದ ಈ ಕೊಡುಗೆ ನಂದಿ ದೇವಾಲಯಕ್ಕೆ ಸಿಕ್ಕಿದೆ. ಡಿ.ಎನ್. ಸುದರ್ಶನರೆಡ್ಡಿ ಶಾಸನ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.