
ಶಿಡ್ಲಘಟ್ಟ: ನಗರದ ಉಲ್ಲೂರುಪೇಟೆ ವಿಜಯನಗರ ಹೆಬ್ಬಾಗಿಲ ಅಶ್ವತ್ಥಕಟ್ಟೆ ಬಳಿ ಕಂದಾಯ ಇಲಾಖೆಯಿಂದ ಇ–ಪೌತಿ ಅಂದೋಲನವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ತಹಶೀಲ್ದಾರ್ ಗಗನ ಸಿಂಧೂ ಮಾತನಾಡಿ, ‘ಕಂದಾಯ ಅಧಿಕಾರಿಗಳು, ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಮೃತಪಟ್ಟ ನಿಮ್ಮ ಹಿರಿಯರ ಹೆಸರಿನಲ್ಲಿರುವ ಆಸ್ತಿಗಳ ದಾಖಲೆಗಳನ್ನು ಕುಟುಂಬದ ವಾರಸುದಾರರ ಹೆಸರಿಗೆ ಮಾಡಿಸಿಕೊಳ್ಳಿ. ಈ ಮೂಲಕ ನಿಮ್ಮ ಪೂರ್ವಜರ ಆಸ್ತಿಯನ್ನು ಜೋಪಾನ ಮಾಡಿಕೊಳ್ಳಿ’ ಎಂದು ಹೇಳಿದರು.
ತಾಲೂಕಿನಲ್ಲಿ ಅನೇಕ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಆಸ್ತಿಗಳ ದಾಖಲೆಗಳು ಮೃತಪಟ್ಟವರ ಹಿರಿಯರ ಹೆಸರಿನಲ್ಲೇ ಇವೆ. ಮೃತಪಟ್ಟು ವರ್ಷಗಳೇ ಕಳೆದಿದ್ದರೂ ಆ ಆಸ್ತಿಯ ದಾಖಲೆಗಳನ್ನು ಅವರ ಮಕ್ಕಳು, ಮೊಮ್ಮಕ್ಕಳ ಹೆಸರಿಗೆ ಬದಲಿಸಿಕೊಂಡಿಲ್ಲ. ಇದರಿಂದ ಆಸ್ತಿಯ ಭಾಗ, ಪಾಲುದಾರಿಕೆ, ಮಾರಾಟ, ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆಯುವುದು, ಅಸ್ತಿ ದಾಖಲೆಗಳನ್ನು ಭದ್ರಪಡಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಇದು ಒಂದೇ ಕುಟುಂಬದ ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರ ನಡುವೆ ಕಲಹಗಳಿಗೂ ಕಾರಣವಾಗುತ್ತಿದೆ. ಇದೆಲ್ಲವನ್ನೂ ಗಮನಿಸಿ ಸರ್ಕಾರವು ಪೌತಿ ಖಾತೆ ಆಂದೋಲನ ಹಮ್ಮಿಕೊಂಡಿದ್ದು, ಕಂದಾಯ ಇಲಾಖೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದಿದ್ದಾರೆ ಎಂದರು.
ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಕುಟುಂಬದ ಎಲ್ಲರೂ ಒಮ್ಮತದಿಂದ ನಿರ್ಧಾರ ಮಾಡಿ ಆಸ್ತಿಯ ಇ–ಪೌತಿ ಖಾತೆ ಮಾಡಿಸಿಕೊಳ್ಳಬಹುದು. ಇದರಿಂದ ನೀವು ಪೌತಿ ಖಾತೆಗಾಗಿ ತಾಲ್ಲೂಕು ಕಚೇರಿ, ನಾಡ ಕಚೇರಿಗೆ ವಿನಾಕಾರಣ ಅಲೆದಾಡುವ ತಾಪತ್ರಯ ತಪ್ಪಲಿದೆ. ಹಣ, ಸಮಯ, ಉಳಿತಾಯ ಆಗಲಿದೆ ಎಂದರು.
ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿ ಏನಾದರೂ ಅನುಮಾನ, ಸಮಸ್ಯೆಗಳು ಇದ್ದಲ್ಲಿ ತಿಳಿಸುವಂತೆ ಎಂದರು.
ಉಪ ತಹಶೀಲ್ದಾರ್ ಚೇತನ್, ಕಸಬಾ ಕಂದಾಯ ಅಧಿಕಾರಿ ವೇಣುಗೋಪಾಲ್, ವಿ.ಎ. ನಾಗರಾಜ್, ರೈತರಾದ ಬಿ.ನಾರಾಯಣಸ್ವಾಮಿ, ವೇಣುಗೋಪಾಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.