ADVERTISEMENT

ಶಿಡ್ಲಘಟ್ಟದ ರಾಮಲಿಂಗೇಶ್ವರ ಬೆಟ್ಟ ರಾಮ–ಈಶ್ವರನ ತಾಣ!

ಸುಂದರ ಪ್ರಕೃತಿ, ಭಕ್ತಿ ಭಾವ ಸೃಜಿಸುವ ತಾಣ

ಡಿ.ಜಿ.ಮಲ್ಲಿಕಾರ್ಜುನ
Published 1 ಜನವರಿ 2026, 4:19 IST
Last Updated 1 ಜನವರಿ 2026, 4:19 IST
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದಲ್ಲಿರುವ ರಾಮಲಿಂಗೇಶ್ವರ ದೇವಾಲಯ
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದಲ್ಲಿರುವ ರಾಮಲಿಂಗೇಶ್ವರ ದೇವಾಲಯ   

ಶಿಡ್ಲಘಟ್ಟ: ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದು ಪ್ರಸಿದ್ಧವಾಗಿದೆ.

ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟ ಪುರಾತನ ಕ್ಷೇತ್ರವಾಗಿದೆ. ಬೆಟ್ಟದ ಮೇಲಿನ ದೇವಾಲಯ ಹಾಗೂ ಪರಿಸರಲು ಹಲವು ವಿಶೇಷತೆ ಹೊಂದಿದ್ದು, ಪ್ರತಿ ವರ್ಷ ಶುಕ್ಲ ಪಕ್ಷದ ಪೌರ್ಣಮಿಯಂದು ನಡೆಯುವ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. 

ಕಣ್ಣು ಹಾಯಿಸಿದಷ್ಟೂ ಕಾಣುವ ಸುಂದರ ಪ್ರಕೃತಿ, ಭಕ್ತಿ ಭಾವ ಸೃಜಿಸುವ ದೇಗುಲ, ಪ್ರಶಾಂತ ವಾತಾವರಣಕ್ಕೆ ಎಂಥವರು ಮಾರುಹೋಗುತ್ತಾರೆ. ಇದೇ ಕಾರಣಕ್ಕೆ ಪ್ರತಿನಿತ್ಯದ ಸಂಚಾರ ದಟ್ಟಣೆ, ಗೋಜು ಗದ್ದಲಗಳಿಂದ ಬೇಸತ್ತವರು ರಜೆ ದಿನಗಳಲ್ಲಿ ರಾಮಲಿಂಗೇಶ್ವರ ಬೆಟ್ಟಕ್ಕೆ ಬರುತ್ತಾರೆ. ಇದು ತಾಲ್ಲೂಕಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

ADVERTISEMENT

ರಾಮಾಯಣದ ಹಿನ್ನೆಲೆ, ಚೋಳರ ಕಾಲದ ಕೆತ್ತನೆಗಳುಳ್ಳ ದೇಗುಲ, ನೂರಾರು ವರ್ಷಗಳ ಇತಿಹಾಸ ಸಾರುವ ಶಿಲ್ಪಗಳು, ಸಾವಿರಾರು ವರ್ಷದಿಂದ ಕದಲದೆ ಇರುವ ಬೆಟ್ಟ, ಬಂಡೆ ಕಲ್ಲುಗಳು, ಸ್ಥಳೀಯರಿಂದ ನಿರ್ಮಾಣಗೊಂಡ ಮೆಟ್ಟಿಲು ಮತ್ತು ಕಮಾನು, ಎಲ್ಲವೂ ಬೆಟ್ಟದ ಕೆಳಗಿನಿಂದ ನೋಡಿದಾಗ ಸುಂದರವಾಗಿ ಕಂಡುಬರುತ್ತದೆ.

ಸಾಕಷ್ಟು ದೂರ ಕಾಣಬಲ್ಲ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯ. ಬೇರೆಲ್ಲೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ. ರಾಮದೊಣೆ, ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ.

ತಾಲ್ಲೂಕು ಆಡಳಿತದಿಂದ ವಿವಿಧ ಇಲಾಖೆಗಳ ಜೊತೆಗೂಡಿ ರಾಮಲಿಂಗೇಶ್ವರ ರಥೋತ್ಸವಕ್ಕೆ ಆಗಸುವ ಭಕ್ತರಿಗೆ ಬಸ್, ಕುಡಿಯುವ ನೀರು, ನೈರ್ಮಲ್ಯ ಸೇರಿ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಬೇಕು. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಹಶೀಲ್ದಾರ್ ಗಗನಸಿಂಧೂ ಹೇಳಿದರು. 

ರಾಮಲಿಂಗೇಶ್ವರಸ್ವಾಮಿ
ಎಂ.ಸುನೀತ ಶ್ರೀನಿವಾಸರೆಡ್ಡಿ
ತಹಶೀಲ್ದಾರ್ ಗಗನಸಿಂಧು

3ರಂದು ಬ್ರಹ್ಮ ರಥೋತ್ಸವ

ಶಿಡ್ಲಘಟ್ಟ ತಾಲ್ಲೂಕಿನ ನಲ್ಲರಾಳ್ಳಹಳ್ಳಿಯ ರಾಮಲಿಂಗೇಶ್ವರ ಬೆಟ್ಟದಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ ಇದೇ 3ರ ಶನಿವಾರ ರಾಮಲಿಂಗೇಶ್ವರ ರಥೋತ್ಸವ ನಡೆಯಲಿದೆ. ದೇವಾಲಯ ಮುಜರಾಯಿ ಇಲಾಖೆಯದ್ದೇ ಆದರೂ ಪ್ರತಿ ವರ್ಷ ಶುಕ್ಲ ಪಕ್ಷದ ಪೌರ್ಣಮಿಯಂದು ನಡೆಯುವ ಬ್ರಹ್ಮರಥೋತ್ಸವದ ನಿರ್ವಹಣೆಯನ್ನು ದೇವಾಲಯ ಸಂಚಾಲಕ ಎಂ.ಸುನೀತ ಶ್ರೀನಿವಾಸರೆಡ್ಡಿ ಮತ್ತು ಕುಟುಂಬದವರು ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ.  ಪವಿತ್ರ ದೇವಾಲಯವಿರುವ ರಾಮಲಿಂಗೇಶ್ವರ ಬೆಟ್ಟ ನಮ್ಮ ಜಿಲ್ಲೆಯಲ್ಲಿನ ವೈಶಿಷ್ಟ್ಯಗಳಲ್ಲಿ ಒಂದು. ರಾಮಾಯಣದೊಂದಿಗೆ ತಳುಕು ಹಾಕಿಕೊಂಡ ಪವಿತ್ರ ತಾಣವಿದು. ರಾಮ ಸ್ಥಾಪಿಸಿದ ಲಿಂಗ ರಾಮದೊಣೆ ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳೂ ಇಲ್ಲಿವೆ ಎಂದು ಕನ್ ವೀನರ್ ಎಂ. ಸುನೀತಾ ಶ್ರೀನಿವಾಸರೆಡ್ಡಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.