ADVERTISEMENT

ಶಿಡ್ಲಘಟ್ಟ: ಮರಗಳ ಅಪ್ಪುಗೆಯಲ್ಲಿದೆ ಸ್ವಚ್ಛ ಸುಂದರ ಶಾಲೆ

ಡಿ.ಜಿ.ಮಲ್ಲಿಕಾರ್ಜುನ
Published 28 ಅಕ್ಟೋಬರ್ 2023, 7:25 IST
Last Updated 28 ಅಕ್ಟೋಬರ್ 2023, 7:25 IST
ಇದ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ “ಕನ್ನಡ - ಇಂಗ್ಲೀಷ್ ಮಾಧ್ಯಮ” ಶಾಲೆಯ ವಿದ್ಯಾರ್ಥಿಗಳು
ಇದ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ “ಕನ್ನಡ - ಇಂಗ್ಲೀಷ್ ಮಾಧ್ಯಮ” ಶಾಲೆಯ ವಿದ್ಯಾರ್ಥಿಗಳು   

ಶಿಡ್ಲಘಟ್ಟ: ನಗರಕ್ಕೆ ಕೂಗಳತೆ ದೂರದಲ್ಲಿರುವ ಇದ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ- ಇಂಗ್ಲಿಷ್ ಮಾಧ್ಯಮ ಶಾಲೆಯ ಸುತ್ತ ಬೆಳೆದು ನಿಂತ ವಿಶಾಲ ಮರಗಳು ಸದಾ ತಂಪು ಮತ್ತು ನೆರಳನ್ನು ನೀಡುತ್ತಿರುವುದರಿಂದ ಮರಗಳ ಅಪ್ಪುಗೆಯಲ್ಲಿರುವಂತೆ ಈ ಶಾಲೆ ಭಾಸವಾಗುತ್ತದೆ.

ಶಾಲೆ ಚಿಕ್ಕದಾದರೂ 60ಕ್ಕೂ ಹೆಚ್ಚು ಸಿಲ್ವರ್ ಹಾಗೂ ಮಳೆಮರಗಳು ನೆರಳು ನೀಡುತ್ತಿವೆ. ಪುಟ್ಟ ವನದ ನಡುವೆ ಶಾಲೆ ಇದ್ದಂತೆ ಭಾಸವಾಗುತ್ತದೆ. ಬೆಳಗ್ಗೆ ಶಾಲೆ ಪ್ರಾರಂಭವಾದೊಡನೆ ಮಕ್ಕಳು ಏಕಕಂಠದಲ್ಲಿ ಭಗವದ್ಗೀತೆ ಶ್ಲೋಕ ಪಠಣ ಮಾಡುತ್ತಾರೆ.

ಶಾಲೆಯಲ್ಲಿ ಯೋಗ, ಧ್ಯಾನ, ವಿವಿಧ ಶ್ಲೋಕಗಳ ಕಲಿಕೆ ಪಠ್ಯದ ಭಾಗವಾದಂತಾಗಿದೆ. ಸ್ವಚ್ಛತೆಗೆ ಇಲ್ಲಿ ಪ್ರಥಮ ಆದ್ಯತೆ. ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ. ಮರಗಿಡಗಳಿಂದ ಉದುರುವ ಎಲೆ, ಸೊಪ್ಪುಗಳನ್ನು ತಂದು ಗುಂಡಿಯಲ್ಲಿ ಹಾಕಿ ಗೊಬ್ಬರ ತಯಾರಿಸುತ್ತಾರೆ. ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಕಲ್ಪಿಸಿದ್ದು, ನಾಯಕತ್ವ ಗುಣ, ಸ್ವಯಂ ಕಲಿಕೆ, ಸ್ವಯಂ ಶಿಸ್ತಿಗೆ ಪ್ರಾಧಾನ್ಯತೆ ಕೊಡಲಾಗಿದೆ.

ADVERTISEMENT

ಕನ್ನಡ ಮತ್ತು ಆಂಗ್ಲ ಮಾಧ್ಯಮದ ಬೋಧನೆ ಇದೆ. ಸ್ಮಾರ್ಟ್ ಕ್ಲಾಸ್ ಕಲಿಕೆ ಇದೆ. ಗಣಕ ಯಂತ್ರದ ಬಳಕೆ ಹಾಗೂ ಕಲಿಕೆಯಿದೆ. ವಿವಿಧ ಅಂತರಶಾಲೆ ಮಟ್ಟದ ಸ್ಪರ್ಧೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಮಕ್ಕಳು ಪ್ರಶಸ್ತಿ ತಂದಿದ್ದಾರೆ.

1947ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಪ್ರಸ್ತುತ 1 ರಿಂದ 7ನೇ ತರಗತಿವರೆಗೆ 100 ವಿದ್ಯಾರ್ಥಿಗಳು ಓದುತ್ತಿದ್ದಾರೆ. 6 ಶಿಕ್ಷಕರಿದ್ದಾರೆ. ಗ್ರಾಮದ ಯುವ ಸಂಘಟನೆ, ದಾನಿಗಳಿಂದ ಹಾಗೂ ಶಿಕ್ಷಕರ ಸ್ನೇಹವರ್ಗದಿಂದ ಪ್ರತಿವರ್ಷ ಮಕ್ಕಳಿಗೆ ಟ್ರಾಕ್ ಸೂಟ್, ಗುರುತಿನ ಚೀಟಿ, ಬೆಲ್ಟ್, ಟೈ ಹಾಗೂ ಶಾಲೆಗೆ ಅಗತ್ಯವುಳ್ಳ ವಿವಿಧ ಸಾಮಗ್ರಿಗಳು ಸಿಗುತ್ತಿವೆ.

ಶಾಲೆಗೆ ಕಾಂಪೌಂಡ್ ಬೇಕಿದೆ. ಶಾಲೆಯ ಆವರಣದಲ್ಲಿ ಬಳಕೆಗೆ ಬಾರದ ಶುದ್ಧ ನೀರಿನ ಘಟಕವಿದೆ. ಅದು ಸುಮಾರು ಒಂದು ಕೊಠಡಿಗಾಗುವಷ್ಟು ಜಾಗವನ್ನು ಆಕ್ರಮಿಸಿದೆ. ಅದನ್ನು ತೆರವು ಮಾಡಿ, ಕೊಠಡಿ ನಿರ್ಮಾಣವಾಗಬೇಕು. ಆಗ 8ನೇ ತರಗತಿ ಪ್ರಾರಂಭಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

ಮರಗಳ ನೆರಳಿನಲ್ಲಿ ತಂಪಾದ ಶಾಲೆ
ನಮ್ಮಲ್ಲಿ ಮಕ್ಕಳಿಗೆ ಉಚ್ಛಾರಣೆ ನೆನಪಿನ ಶಕ್ತಿ ವೃದ್ಧಿಸಲು ಸಂಸ್ಕೃತಿ ಪರಿಚಯಿಸಲು ಭಗವದ್ಗೀತೆ ಪಠಣ ಮಾಡಿಸುತ್ತೇವೆ. ವಿದ್ಯಾರ್ಥಿಗಳು ಉತ್ತಮ ಕಲಿಕೆಯೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕೆಂಬುದು ನಮ್ಮ ಉದ್ದೇಶ
ಜಿ.ಎನ್.ಮನ್ನಾರ್‌ಸ್ವಾಮಿ ಮುಖ್ಯಶಿಕ್ಷಕ
ನಮ್ಮ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ಇರುವುದು ನೋಡಿ ಖುಷಿಯಾಗುತ್ತದೆ. ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆ ಹೇಗಾಗಬಹುದು ಅನ್ನುವುದಕ್ಕೆ ನಮ್ಮ ಶಾಲೆಯೇ ಸಾಕ್ಷಿ.
ಭೈರೇಗೌಡ ಎಸ್‌ಡಿಎಂಸಿ ಅಧ್ಯಕ್ಷ
ಶಾಲಾ ವಾತಾವರಣ ಚೆನ್ನಾಗಿದೆ. ಶಿಕ್ಷಕರು ಚೆನ್ನಾಗಿ ಕಲಿಸುತ್ತಾರೆ. ನಾವು ಸಂಸ್ಕೃತದ ಶ್ಲೋಕ ಗೀತೆಯನ್ನು ಬಾಯಿಪಾಠ ಮಾಡಿ ಹಾಡುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ
ಶಾರಿಕ 7ನೇ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.