
ಚಿಕ್ಕಬಳ್ಳಾಪುರ: ತಾಲ್ಲೂಕಿನ ಬೀಡಗಾನಹಳ್ಳಿ ಬಳಿಯ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗೆ ಮಂಗಳವಾರ ರಾತ್ರಿ ತೆರೆ ಬಿದ್ದಿತು.
ತಮಿಳುನಾಡಿನ ಬನ್ನಾರಿ ಅಮ್ಮನ್ ತಾಂತ್ರಿಕ ವಿದ್ಯಾಲಯದ ತಂಡ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮರಾಠ್ವಾಡ ಮಿತ್ರ ಮಂಡಳ್ಸ್ ಎಂನಿಯರಿಂಗ್ ಕಾಲೇಜು ಮತ್ತು ಜೆಎಸ್‌ಪಿಎಂ ವಿಶ್ವವಿದ್ಯಾಲಯದ ತಂಡಗಳು ಹಾಗೂ ಲಖನೌ ನಗರದ ಬಿ.ಎನ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ತಂಡ ಸೇರಿದಂತೆ ಒಟ್ಟು ನಾಲ್ಕು ತಂಡಗಳು ತಲಾ ₹1.5 ಲಕ್ಷ ನಗದು ಬಹುಮಾನವನ್ನು ಪಡೆದು ಗೆಲುವಿನ ನಗೆ ಬೀರಿದವು.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕಾರ್ಯಕ್ರಮದ ಅಂಗವಾಗಿ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ತರಹೇವಾರಿ ತಯಾರಿಗಳು ನಡೆದಿದ್ದವು. ಸರಿಸುಮಾರು 20 ಸಮಿತಿಗಳು ರಾಷ್ಟ್ರಮಟ್ಟದ ಹ್ಯಾಕಥಾನ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದವು. ದೇಶದ 11 ರಾಜ್ಯಗಳ 18 ತಂಡಗಳು ಭಾಗವಹಿಸಿದ್ದವು.
ಒಂದೊಂದು ರಾಜ್ಯದ ವಿದ್ಯಾರ್ಥಿಗಳು ಬಣ್ಣ ಬಣ್ಣದ ಸಮವಸ್ತ್ರ ಧರಿಸಿ, ಅಗತ್ಯ ಸಲಕರಣೆಗಳನ್ನೊತ್ತು ತಂದು ತಮ್ಮ ಕಾಲೇಜು ಪ್ರತಿನಿಧಿಸಿದ್ದವು.
ತಂಡಗಳಿಗೆ ಅಗತ್ಯವಿರುವ ನಿರಂತರ ಇಂಟರ್‌ನೆಟ್ ಸೌಲಭ್ಯ, ನೀರು, ವಸತಿ, ತಿಂಡಿ ತಿನಿಸುಗಳು, ಲವಲವಿಕೆಗಾಗಿ ಒಳಾಂಗಣ ಕ್ರೀಡೆಗಳಾದ ಚೆಸ್, ಟೇಬಲ್ ಟೆನಿಸ್, ಕೇರಂ ಬೋರ್ಡ್, ಜುಂಬಾ ಡ್ಯಾನ್ಸ್ ಮತ್ತು ಯೋಗ ಸೇರಿದಂತೆ ಸೌಕರ್ಯಗಳನ್ನು ಕಾಲೇಜು ಆಡಳಿತ ಮಂಡಳಿ ಒದಗಿಸಿತ್ತು.
ಸಮಾರೋಪದಲ್ಲಿ ಕಾಲೇಜು ಪ್ರಾಂಶುಪಾಲ ತಿಪ್ಪೇಸ್ವಾಮಿ ಹಾಗೂ ಪ್ರಮುಖರ ಸಮ್ಮುಖದಲ್ಲಿ ವಿಜೇತ ತಂಡಗಳ ಹೆಸರು ಘೋಷಿಸಲಾಯಿತು.
ಎಐಸಿಟಿಇ ನಿರ್ದೇಶಕ ಡಾ.ಎನ್.ಎಚ್.ಸಿದ್ದಲಿಂಗಸ್ವಾಮಿ, ಎಐಸಿಟಿಇ ನೋಡಲ್ ಅಧಿಕಾರಿ ರಾಜೀವ್ ಕುಮಾರ್, ಡಿಆರ್‌ಡಿಒ ನೋಡಲ್ ಅಧಿಕಾರಿ ರಾಜೇಶ್ ಯಾದವ್ ಹಾಗೂ ಇತರರನ್ನು ಕಾಲೇಜು ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್‌ಜಿಐ ನಿರ್ದೇಶಕ ಎಸ್.ಜಿ.ಗೋಪಾಲಕೃಷ್ಣ, ಯೋಗೀಶ ಎಚ್.ಸಿ, ಶಾರದಾ ಟಿ, ಗೋಪಿನಾಥ್, ಸಂಜೀವ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.