ADVERTISEMENT

ಜಾಗೃತಿಗಾಗಿ ಸಾಮಾಜಿಕ ಮಾಧ್ಯಮ ಬಳಕೆ

ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕರ್ತೆಯರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 16:09 IST
Last Updated 31 ಮಾರ್ಚ್ 2020, 16:09 IST
ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗೆ ಯೂಟೂಬ್‌ ಮುಖಾಂತರ ಕೋವಿಡ್-19 ರೋಗ ನಿಯಂತ್ರಣ ಕ್ರಮಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಯಿತು
ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗೆ ಯೂಟೂಬ್‌ ಮುಖಾಂತರ ಕೋವಿಡ್-19 ರೋಗ ನಿಯಂತ್ರಣ ಕ್ರಮಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಯಿತು   

ಶಿಡ್ಲಘಟ್ಟ: ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪಾಲಿಸಬೇಕಾದ ನಿಯಮಗಳನ್ನು ತಿಳಿಸುವ ಉದ್ದೇಶದಿಂದ ಯೂಟೂಬ್‌ ಮುಖಾಂತರ ತರಬೇತಿ ನೀಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು, ಪಿಡಿಒ, ಸಿಬ್ಬಂದಿ ಹಾಗೂ ಕಾರ್ಯಪಡೆ ಸದಸ್ಯರಿಗೆ ಯೂಟೂಬ್ ಮುಖಾಂತರ ಕೋವಿಡ್-19 ರೋಗ ನಿಯಂತ್ರಣ ಕ್ರಮಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಿ ಅವರು ಮಾತನಾಡಿದರು.

ಕೊರೊನಾ ವೈರಸ್ ಎನ್ನುವುದು ಶ್ವಾಸಕೋಶದ ಕಾಯಿಲೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಶೀನಿದಾಗ ಬರುವಂತಹ ನೀರಿನ ಕಣಗಳಿಂದ ಇದು ಹಬ್ಬುವುದು. ನಿಮ್ಮ ಕಣ್ಣು, ಮೂಗು ಅಥವಾ ಬಾಯಿಗೆ ಈ ಹನಿಗಳು ಬಿದ್ದರೆ ಆಗ ನಿಮಗೆ ಕೂಡ ಸೋಂಕು ತಗುಲಬಹುದು ಎಂದರು.

ADVERTISEMENT

ಹೊಸಬರು ಯಾರೇ ಗ್ರಾಮಕ್ಕೆ ಬಂದರೂ ತಕ್ಷಣ ಅವರನ್ನು ಪ್ರತ್ಯೇಕವಾಗಿರಿಸಿ ಅವರ ಮೇಲೆ ನಿಗಾ ವಹಿಸಬೇಕು. ತಾಲ್ಲೂಕು ಆಡಳಿತದ ಗಮನಕ್ಕೆ ಹೊರಗಿನಿಂದ ಬಂದವರ ಬಗ್ಗೆ ತಕ್ಷಣ ಮಾಹಿತಿ ಕೊಡಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಅನವಶ್ಯಕವಾಗಿ ಮನೆಗಳಿಂದ ಹೊರಬರಬಾರದು ಎಂದು ಹೇಳಿದರು.

ಕೊವಿಡ್-19 ಸೋಂಕಿನಿಂತ ನಿಮ್ಮನ್ನು ಹಾಗೂ ಇತರರನ್ನು ಕಾಪಾಡಲು ಇರುವ ಒಳ್ಳೆಯ ವಿಧಾನವೆಂದರೆ ಪದೇ ಪದೇ ಕೈಗಳನ್ನು ತೊಳೆಯುತ್ತಾ ಇರಬೇಕು. ಕೆಮ್ಮು ಅಥವಾ ಶೀನು ಬಂದ ವೇಳೆ ಕರವಸ್ತ್ರ ಹಿಡಿದು ಮುಖ ಮುಚ್ಚಿಕೊಳ್ಳಿ. ಯಾರಾದರೂ ಕೆಮ್ಮುತ್ತಿದ್ದರೆ ಅಥವಾ ಶೀನುತ್ತಿದ್ದರೆ ಆಗ ನೀವು ಅವರಿಂದ ಒಂದು ಮೀಟರ್ ಅಂತರ ಕಾಯ್ದುಕೊಳ್ಳಿ. ಕೊರೋನಾ ವೈರಸ್ ನಿಂದ ಪಾರಾಗಲು ಕೆಲವು ಸಾಮಾನ್ಯ ರಕ್ಷಣಾ ಕ್ರಮಗಳನ್ನು ನೀವು ಪಾಲಿಸಿಕೊಂಡು ಹೋಗಿ ಎಂದು ಗ್ರಾಮಗಳಲ್ಲಿ ಜನರಿಗೆ ಮನವರಿಕೆ ಮಾಡಿಕೊಡಿ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗ್ಯಲಕ್ಷ್ಮಿ, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.