ADVERTISEMENT

ಮೂರು ನಗರಸಭೆಗಳಿಗೆ ಶೀಘ್ರದಲ್ಲೇ ಚುನಾವಣೆ?

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗದಿಂದ ಜಿಲ್ಲಾಧಿಕಾರಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 13:16 IST
Last Updated 14 ಸೆಪ್ಟೆಂಬರ್ 2019, 13:16 IST
ಚಿಕ್ಕಬಳ್ಳಾಪುರ ನಗರಸಭೆ ಕಟ್ಟಡ
ಚಿಕ್ಕಬಳ್ಳಾಪುರ ನಗರಸಭೆ ಕಟ್ಟಡ   

ಚಿಕ್ಕಬಳ್ಳಾಪುರ: ಅವಧಿ ಮುಕ್ತಾಯವಾದ ಮತ್ತು ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದೆ.


ಚುನಾವಣಾ ಆಯೋಗವು ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದೆ. ಈ ಮೂರು ನಗರಸಭೆಗಳ ಚುನಾವಣೆ ನಡೆಸಲು ಅಗತ್ಯವಾದ ಮತದಾರರ ಪಟ್ಟಿ, ಮತಗಟ್ಟೆ ಕೇಂದ್ರಗಳ ಪಟ್ಟಿ ಸಿದ್ಧಪಡಿಸಿ ಆಯೋಗಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.


ಚುನಾವಣೆ ನಡೆಯುವ ವಾರ್ಡ್‌ಗಳ ಮತಗಟ್ಟೆಗಳಿಗೆ ಅನುಸಾರವಾಗಿ ಮತದಾನ ಸಿಬ್ಬಂದಿ ನೇಮಕ ಮತ್ತು ತರಬೇತಿಗೆ ಕ್ರಮವಹಿಸಿ. ಅಗತ್ಯ ಸಂಖ್ಯೆಯ ವಿದ್ಯುನ್ಮಾನ ಮತ ಯಂತ್ರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ವೆಚ್ಚ ಪರಿಶೀಲನಾ ಅಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ಅಗತ್ಯ ತರಬೇತಿ ನೀಡುವಂತೆ ಸುತ್ತೋಲೆಯಲ್ಲಿ ಹೇಳಲಾಗಿದೆ.

ADVERTISEMENT


ಮೊಹರು, ಸೀಲಿಂಗ್ ವ್ಯಾಕ್ಸ್, ಅಳಿಸಲಾಗದ ಶಾಹಿ ಜತೆಗೆ ಮತಗಟ್ಟೆಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ಸದ್ಯದಲ್ಲಿಯೇ ಆಯೋಗದಿಂದ ಒದಗಿಸಲಾಗುತ್ತದೆ. ಆಯೋಗ ಬಿಡುಗಡೆ ಮಾಡಿರುವ ಅನುದಾನದಲ್ಲಿ ಚುನಾವಣಾ ವೆಚ್ಚಗಳನ್ನು ಭರಿಸಿ ಉಳಿಯುವ ಅನುದಾನವನ್ನು ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಕೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಅಧಿನ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ.


ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಗಳ ತಲಾ 31 ವಾರ್ಡ್‌ಗಳಂತೆ 93 ವಾರ್ಡ್‌ಗಳಿಗೆ ಮತದಾನ ನಡೆಯಬೇಕಿದೆ. ಚುನಾವಣಾ ಆಯೋಗವು ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿರುವ ನಗರ ಸ್ಥಳೀಯ ಸಂಸ್ಥೆಗಳು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಆದರೆ ಚಿಕ್ಕಬಳ್ಳಾಪುರ ನಗರಸಭೆಯ 17ನೇ ವಾರ್ಡ್‌ನ ಮೀಸಲಾತಿ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿ ಅಲ್ಲಿಯೂ ಬಗೆಹರಿಯದೆ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ವಿಚಾರದಲ್ಲಿ ಆಯೋಗ ಯಾವ ರೀತಿ ಕ್ರಮಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.