ADVERTISEMENT

ಶಿಡ್ಲಘಟ್ಟ | ಶ್ರೀರಾಮ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 14:52 IST
Last Updated 25 ಮೇ 2025, 14:52 IST
ಶಿಡ್ಲಘಟ್ಟದಲ್ಲಿ ಶ್ರೀರಾಮ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೇರಿತು
ಶಿಡ್ಲಘಟ್ಟದಲ್ಲಿ ಶ್ರೀರಾಮ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೇರಿತು   

ಶಿಡ್ಲಘಟ್ಟ: ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್‌ನ ಆಂಜನೇಯ ಗುಡಿಯಿಂದ ಬಸ್ ನಿಲ್ದಾಣದ ಸಲ್ಲಾಪುರಮ್ಮ ದೇವಾಲಯದವರೆಗೆ ಸಾಗಿದ ಶ್ರೀರಾಮ ಶೋಭಾಯಾತ್ರೆಯ ವೈಭವವನ್ನು ನಾಗರೀಕರು ಭಾನುವಾರ ಕಣ್ತುಂಬಿಕೊಂಡರು.

ಆಂಜನೇಯ ಗುಡಿಯಲ್ಲಿ ಪೂಜೆ ಸಲ್ಲಿಸಿದ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಶ್ರೀರಾಮನ ಪ್ರತಿಮೆಯಿದ್ದ ಟ್ರ್ಯಾಕ್ಟರ್‌ ಚಲಾಯಿಸಿ ಯಾತ್ರೆಗೆ ಚಾಲನೆ ನೀಡಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹಿಂದೂ ಧರ್ಮದ ಅತಿದೊಡ್ಡದ ಅಸ್ಮಿತೆ ಶ್ರೀರಾಮ ಪ್ರಭು. ಶೋಭಾಯಾತ್ರೆಯು ನಮ್ಮೆಲ್ಲರ ಅಸ್ಮಿತೆಯಾಗಿದೆ.
ಹಿಂದೂ ಧರ್ಮದ ಆಚಾರ ವಿಚಾರ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾಯಕವನ್ನು ನಾವೆಲ್ಲರೂ ಮಾಡುವ ಜತೆಗೆ ನಮ್ಮ ಮಕ್ಕಳು ಕೂಡ ಧರ್ಮವನ್ನು ಪಾಲಿಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ ಎಂದರು.

ADVERTISEMENT

ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಏರ್ಪಡಿಸಿರುವ ಶೋಭಾಯಾತ್ರೆಗೆ ರೈತಪರ, ದಲಿತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿರುವುದು ಸಂತಸದ ವಿಚಾರ ಎಂದರು.

ಸೀಕಲ್ ರಾಮಚಂದ್ರಗೌಡ ಮಾತನಾಡಿ, ಶ್ರೀರಾಮನನ್ನು ನಾವು ಪಿತೃವಾಕ್ಯ ಪರಿಪಾಲಕನಾಗಿ ನೋಡುತ್ತೇವೆ. ಜಗತ್ತಿನ ಕೋಟ್ಯಂತರ ಮಂದಿಗೆ ಆದರ್ಶ ಪುರುಷನಾಗಿದ್ದಾನೆ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಅಖಂಡ ಭಾರತದಲ್ಲಿರುವ ನಾವೆಲ್ಲರೂ ಒಂದೆ ಎನ್ನುವ ಭಾವನೆ ಮೂಡಬೇಕಿದೆ. 12ನೇ ಶತಮಾನದಲ್ಲಿ ಬಸವಣ್ಣ ಹೇಳಿದಂತೆ ನಾವೆಲ್ಲರೂ ಸಂವಿಧಾನವನ್ನು ಪಾಲಿಸಬೇಕು. ಎಲ್ಲರೂ ಒಂದೆಂಬ ಭಾವನೆಯನ್ನು ಇನ್ನೂ ಹೆಚ್ಚು ಬೆಳೆಸಿಕೊಳ್ಳಬೇಕು ಎಂದರು.

ಆಂಜನೇಯ ವೇಷಧಾರಿ, ಡೊಳ್ಳು ಕುಣಿತ, ತಮಟೆ, ಚೆಂಡೆ ಇನ್ನಿತರೆ ಜನಪದ ಕಲಾ ತಂಡಗಳು ಶೋಭಾಯಾತ್ರೆಗೆ ಕಳೆ ನೀಡಿತು. ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು, ಸಂಸ್ಕಾರ ಭಾರತಿ ಸದಸ್ಯರು ಶ್ರೀರಾಮನ ಹಾಡು ಹಾಡುತ್ತಾ ಸಾಥ್ ನೀಡಿದರು.

ಡಿವೈಎಸ್‌ಪಿ ಮುರಳೀಧರ್, ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಚಲುವರಾಜು, ಬಜರಂಗದಳದ ವೆಂಕೋಬರಾವ್, ಕನ್ನಪ್ಪನಹಳ್ಳಿ ಮಲ್ಲೇಶ್ ಸೇರಿದಂತೆ ಮುಖಂಡರು, ನಾನಾ ಸಂಘ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಶ್ರೀರಾಮ ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.