ADVERTISEMENT

ಚಿಣ್ಣರಿಗೆ ಸಿಹಿ ತಿನ್ನಿಸಿ ಸ್ವಾಗತಿಸಿದ ಜಿಲ್ಲಾಧಿಕಾರಿ ಆರ್.ಲತಾ

ಇಂದಿನಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳು ಆರಂಭ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 4:36 IST
Last Updated 9 ನವೆಂಬರ್ 2021, 4:36 IST
ಅಂಗನವಾಡಿಗೆ ಬಂದ ಮಕ್ಕಳ ಜತೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ
ಅಂಗನವಾಡಿಗೆ ಬಂದ ಮಕ್ಕಳ ಜತೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ   

ಚಿಕ್ಕಬಳ್ಳಾಪುರ: ರಾಜ್ಯದಾದ್ಯಂತ ಸೋಮವಾರದಿಂದ ಅಂಗನವಾಡಿಗಳು ಆರಂಭವಾಗಿದ್ದು ಜಿಲ್ಲೆಯಲ್ಲಿಯೂ ಚಿಣ್ಣರಿಗೆ ಸಿಹಿ ನೀಡಿ ಅಂಗನವಾಡಿಗಳಿಗೆ ಬರ ಮಾಡಿಕೊಳ್ಳಲಾಯಿತು. ಒಂದೂಮುಕ್ಕಾಲು ವರ್ಷಗಳ ನಂತರ ಅಂಗನವಾಡಿಗೆ ಬಂದ ಮಕ್ಕಳಿಗೆ ಗಣ್ಯರು ಮತ್ತು ಅಧಿಕಾರಿಗಳು ಸಿಹಿ ತಿನ್ನಿಸಿದರು. ಮಕ್ಕಳ ಜತೆಗೆ ಪೋಷಕರೂ ಬಂದಿದ್ದರು.

‘ಅಂಗನವಾಡಿ ಮಕ್ಕಳ ಪ್ರವೇಶೋತ್ಸವ’ ಪ್ರಯುಕ್ತ ಕೇಂದ್ರಗಳಲ್ಲಿ ಬಲೂನ್, ತೋರಣ ಕಟ್ಟಲಾಗಿತ್ತು. ಮಕ್ಕಳಿಗೆ ಕಾರ್ಯಕರ್ತೆಯರು ಹೂವು, ಚಾಕೊಲೆಟ್, ಬಿಸ್ಕತ್ ನೀಡಲಾಯಿತು.

ನಗರದ ಎಚ್.ಎಸ್ ಗಾರ್ಡನ್‌ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ‘ಅಂಗನವಾಡಿ ಮಕ್ಕಳ ಪ್ರವೇಶೋತ್ಸವ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್.ಲತಾ ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸುವ ಮೂಲಕ ಉದ್ಘಾಟಿಸಿದರು.

ADVERTISEMENT

ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಕೋವಿಡ್ ಸೋಂಕು ಜಿಲ್ಲೆಯ ಯಾವ ಮಗುವಿಗೂ ಹರಡದಂತೆ ಹೆಚ್ಚಿನ ಗಮನವಹಿಸಬೇಕು ಎಂದು ಆರ್.ಲತಾ ಸೂಚಿಸಿದರು.

ಅಂಗನವಾಡಿ ಕೇಂದ್ರಗಳು ಆರಂಭಗೊಳ್ಳುತ್ತಿರುವುದು ಸಂತಸದ ಬೆಳವಣಿಗೆ. ಮಕ್ಕಳ ಸುರಕ್ಷತೆ ಬಹಳ ಮುಖ್ಯ. ಅಂಗನವಾಡಿ ಕೇಂದ್ರಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಂಗನವಾಡಿಗಳ ಮಕ್ಕಳು ಬಹಳ ಚಿಕ್ಕವರಾಗಿದ್ದಾರೆ. ಅವರಿಗೆ ಹೆಚ್ಚಿನ ಕಾಳಜಿಯ ಹಾಗೂ ಪಾಲನೆಯ ಅವಶ್ಯಕತೆ ಇದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಎಲ್ಲ ತರಗತಿಗಳು ನಡೆಯುತ್ತಿವೆ. ಇಲ್ಲಿಯವರೆಗೆ ಯಾವ ಶಾಲಾ ಮಕ್ಕಳಿಗೂ ಕೋವಿಡ್ ಬಂದಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಗಣನೀಯವಾಗಿ ಕಡಿಮೆ ಆಗಿದೆ. ಅಂದಮಾತ್ರಕ್ಕೆ ಯಾರೂ ನಿರ್ಲಕ್ಷ್ಯವಹಿಸಬಾರದು. ಕೋವಿಡ್ ಪ್ರಕರಣಗಳನ್ನು ಶೂನ್ಯಗೊಳಿಸಲು ಸಹಕರಿಸಬೇಕು ಎಂದು ಕೋರಿದರು.

ಬಹುದಿನಗಳ ನಂತರ ಅಂಗನವಾಡಿ ಕೇಂದ್ರಕ್ಕೆ ಬಂದ ಮಕ್ಕಳಲ್ಲಿ ಉಂಟಾದ ಅನುಭವವನ್ನು ಹಾಗೂ ಮಕ್ಕಳ ಯೋಗಕ್ಷೇಮವನ್ನು ಜಿಲ್ಲಾಧಿಕಾರಿ ವಿಚಾರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಆನಂದ ರೆಡ್ಡಿ ಬಾಬು, ಪೌರಾಯುಕ್ತ ಮಹಂತೇಶ್, ನಗರಸಭೆ ಸದಸ್ಯರಾದ ಸ್ವಾತಿ ಮಂಜುನಾಥ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಶ್ವತ್ಥಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.