ಬಾಗೇಪಲ್ಲಿ: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೇವಲ 100 ಕಿ.ಮೀ ದೂರದಲ್ಲಿರುವ ಗಡಿ ತಾಲ್ಲೂಕು ಬಾಗೇಪಲ್ಲಿಯ ಸಮಗ್ರ ಅಭಿವೃದ್ಧಿಗೆ ಇದುವರೆಗೆ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಬೆರಳೆಣಿಕೆಯಷ್ಟು ಯೋಜನೆಗಳು ಮಾತ್ರವೇ ಅನುಷ್ಠಾನವಾಗಿವೆ. ಹಿಂದುಳಿದ ತಾಲ್ಲೂಕಿನ ಕೃಷಿ ಕಾರ್ಮಿಕರು ಹಾಗೂ ಜನಸಾಮಾನ್ಯರ ಜೀವನಧಾರವಾದ ಶಾಶ್ವತ ಯೋಜನೆಗಳು ಇದುವರೆಗೆ ಅನುಷ್ಠಾನವಾಗದೆ ಇರುವುದು ಬೇಸರದ ಸಂಗತಿ.
ಈ ಬಾರಿಯ ಬಜೆಟ್‌ನಲ್ಲಾದರೂ ತಾಲ್ಲೂಕಿನ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳು ಪ್ರಕಟವಾಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ ತಾಲ್ಲೂಕಿನ ಜನರು.
ಕಾಶ್ಮೀರದಿಂದ ಕನ್ಯಾಕುಮಾರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ–44 ಪಟ್ಟಣದ ಅಂಚಿನಲ್ಲಿ ಹಾದು ಹೋಗಿದೆ. ಆಂಧ್ರಪ್ರದೇಶದ ಗಡಿಯಲ್ಲಿ ಇದೆ. ಆದಾಗ್ಯೂ, ತಾಲ್ಲೂಕಿನಲ್ಲಿ ಯಾವುದೇ ಶಾಶ್ವತವಾದ ನೀರು, ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಹೆಚ್ಚಿನ ಅನುದಾನ ಕಲ್ಪಿಸಿಲ್ಲ. ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದರೂ, ಈ ಹಿಂದಿನ ರಾಜ್ಯ ಬಜೆಟ್‌ಗಳಲ್ಲಿ ವಿಶೇಷ ಅನುದಾನಗಳು ಸಿಕ್ಕಿಲ್ಲ. ಇದರಿಂದ ತಾಲ್ಲೂಕು ಮತ್ತಷ್ಟು ಹಿಂದಕ್ಕೆ ಹೋಗಿದೆ.
ಪಾತಪಾಳ್ಯ ಬಳಿಯ ಗಂಟ್ಲಮಲ್ಲಮ್ಮ ಕಣಿವೆ ಬಳಿ ಬ್ಯಾರೇಜ್ ನಿರ್ಮಾಣಕ್ಕೆ ₹180 ಕೋಟಿ ಮಂಜೂರಾಗಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಣ ಸಿಗುವುದೇ ಎಂಬುದು ಜನರ ಪ್ರಶ್ನೆಯಾಗಿದೆ. ತಾಲ್ಲೂಕಿನಲ್ಲಿ ರೈತರು ಅತಿ ಹೆಚ್ಚು ಟೊಮೆಟೊ ಬೆಳೆಯುತ್ತಾರೆ. ಪರಗೋಡು ಗ್ರಾಮ ಪಂಚಾಯಿತಿ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವ ಟೊಮೆಟೊ ಮಾರುಕಟ್ಟೆಗೆ ರಸ್ತೆ, ನೀರು ಸೇರಿದಂತೆ ಕೃಷಿ ಭವನ ನಿರ್ಮಾಣಕ್ಕೆ ಈ ಬಜೆಟ್‌ನಲ್ಲಿ ಘೋಷಣೆ ಆಗಲಿ ಎಂಬುದು ಜನರ ನಿರೀಕ್ಷೆಯಾಗಿದೆ. ಮಹಿಳೆಯರಿಗೆ ಗಾರ್ಮೆಂಟ್ಸ್, ನಿರುದ್ಯೋಗಿಗಳಿಗೆ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಮಾಡಿ ಉದ್ಯೋಗ ಒದಗಿಸಬೇಕು ಎಂಬ ಕೂಗು ಇದೆ.
ಎಚ್.ಎನ್.ವ್ಯಾಲಿಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಕೆರೆಗಳ ಪಕ್ಕ ಹಾಕಿದ ಪೈಪುಗಳು ತುಕ್ಕು ಹಿಡಿಯುವ ಹಂತ ತಲುಪಿವೆ. ತಾಲ್ಲೂಕಿನಲ್ಲಿ ಯಾವುದೇ ನದಿನಾಲೆಗಳು ಇಲ್ಲ. ಹೀಗಾಗಿ, ತಾಲ್ಲೂಕಿನ ಗೂಳೂರು, ಮಿಟ್ಟೇಮರಿ, ಪಾತಪಾಳ್ಯ ಸೇರಿದಂತೆ ಇತರ ಗ್ರಾಮಗಳು ಮತ್ತು ತಾಂಡಗಳ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದೆ. ಇದರಿಂದ ಜನರು ಪ್ಲೋರೊಸಿಸ್ ರೋಗದ ಭಾದೆ ಕಾಡುತ್ತಿದೆ. ಕೈ ಕಾಲು, ಸೊಂಟ ನೋವುಗಳಿಂದ ಈ ಭಾಗದ ಜನ ತತ್ತರಿಸಿದ್ದಾರೆ. ಹಲ್ಲುಗಳು ಪಾಚಿ ಕಟ್ಟಿವೆ. ಬಿಸಿ ಮಾಡಿದ ನೀರಿನ ಪಾತ್ರೆಗಳು, ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್, ಗೀಜರ್‌ಗಳಲ್ಲಿ ಬಿಳಿಯಾಗಿ ಬಿಲ್ಲೆಗಳ ಮಾದರಿಯಲ್ಲಿ ಫ್ಲೊರೈಡ್ ಅಂಶ ಅಂಟಿದೆ. ಜನ ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ಲಬಿಸಲು, ಕೆರೆ, ಕುಂಟೆಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಿಸಲು, ಹಚ್ಚ ಹಸಿರಿನಿಂದ ಕೂಡಿರಲು ತಾಲ್ಲೂಕಿಗೆ ಡಾ.ಪರಮಶಿವಯ್ಯ ವರದಿ ಜಾರಿ ಅಥವಾ ಕೃಷ್ಣಾ ನದಿಯ ಬಿ ಸ್ಕೀಂನ ಬಚಾವತ್ ಆಯೋಗದಂತೆ ಪಾಲು ಇರುವ ನೀರು ಹರಿಸಬೇಕು ಎಂದು ರೈತರ ಬೇಡಿಕೆ ಆಗಿದೆ.
ತಾಲ್ಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬಡ ಹಾಗೂ ಕೃಷಿಕೂಲಿಕಾರ್ಮಿಕರ ಜನರಿಗೆ ಕಡಿಮೆ ದರದಲ್ಲಿ ಸಿಗುವ ತಿಂಡಿ, ಊಟ ವಿತರಿಸುವ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ ಎಂಬುದು ಜನರ ಅಳಲು.
ಖಾಲಿ ಹುದ್ದೆ ಭರ್ತಿಗೆ ಕ್ರಮ ವಹಿಸಿ
ಕೃಷಿ ತೋಟಗಾರಿಕೆ ರೇಷ್ಮೆ ತಾಲ್ಲೂಕು ಪಂಚಾಯಿತಿ ಪುರಸಭೆ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಸಿಬ್ಬಂದಿ ವೈದ್ಯರ ತಂತ್ರಜ್ಞರ ಶಿಕ್ಷಕ ಶಿಕ್ಷಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಾಲೆ ಅಂಗನವಾಡಿ ಕೇಂದ್ರದ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಲ್ಲೂಕಿನಲ್ಲಿ ರಾಜ ಮಹಾರಾಜರು ಬ್ರಿಟಿಷರು ನಿರ್ಮಿಸಿದ ಸ್ಮಾರಕಗಳು ಕೆರೆ ಕುಂಟೆಗಳು ರಾಜಕಾಲುವೆಗಳ ಅಭಿವೃದ್ಧಿ ಅಂತರ್ಜಲ ಮಟ್ಟ ವೃದ್ಧಿಸುವ ಯೋಜನೆಗಳಿಗೆ ಸರ್ಕಾರವು ಈ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿ ಎಂಬುದು ಜನರ ಆಕಾಂಕ್ಷೆಯಾಗಿದೆ.
ಶಾಶ್ವತ ನೀರಾವರಿಗಾಗಿ ಕೃಷ್ಣ ನದಿ ನೀರನ್ನು ಬಯಲು ಸೀಮೆಗೆ ಹರಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಈ ಯೋಜನೆ ಅನುಷ್ಠಾನಗೊಳಿಸಬೇಕು.ಚನ್ನರಾಯಪ್ಪ, ಪ್ರಾಂತ ರೈತ ಸಂಘದ ಮುಖಂಡ ಬಾಗೇಪಲ್ಲಿ
ಕೂಲಿಕಾರ್ಮಿಕರು ಮಹಿಳೆಯರಿಗೆ ಉದ್ಯೋಗಾವಕಾಶಗಳು ಕಲ್ಪಿಸಲು ಗಾರ್ಮೆಂಟ್ಸ್ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಸರ್ಕಾರ ಹೆಚ್ಚಿನ ಅನುದಾನ ಕಲ್ಪಿಸಬೇಕು.ಉಮಾಶ್ರೀ, ಪ್ರಾಂಶುಪಾಲರು ಬ್ಲೂಮ್ಸ್ ಕಾಲೇಜು
ಬಾಗೇಪಲ್ಲಿಯನ್ನು ಪುರಸಭೆಯಿಂದ ನಗರಸಭೆಯಾಗಿ ಮೇಲ್ದೇರ್ಜೆಗೇರಿಸಬೇಕು. ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕು.ಕೆ.ಎನ್.ಹರೀಶ್, ರಕ್ಷಣಾ ವೇದಿಕೆ ಅಧ್ಯಕ್ಷ
ಪ್ರವಾಸಿ ತಾಣಗಳಾದ ಗುಮ್ಮನಾಯಕನಪಾಳ್ಯದ ಕೋಟೆ ಗಡಿದಂ ದೇವಾಲಯ ಯಾತ್ರಿ ನಿವಾಸ ಹುಸೇನುದಾಸಯ್ಯ ದರ್ಗಾ ಆದಿನಾರಾಯಣ ಮಠ ಗೂಳೂರಿನ ನಿಡುಮಾಮಿಡಿ ಮಠ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಬೇಕು.ಜಿ.ಎಂ.ರಾಮಕೃಷ್ಣಪ್ಪ, ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.