ADVERTISEMENT

ಬಜೆಟ್‌: ಜಿಲ್ಲೆಯ ಮಟ್ಟಿಗೆ ನೀಗದ ‘ಬೇಸರ’

ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ನಿಂದಲೂ ಸಂತಸಗೊಳ್ಳದ ಜನರು, ಸರ್ಕಾರಿ ವೈದ್ಯಕೀಯ ಕಾಲೇಜು, ನೀರಾವರಿ ಯೋಜನೆಗಳನ್ನು ಕಡೆಗಣನೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 15:46 IST
Last Updated 8 ಫೆಬ್ರುವರಿ 2019, 15:46 IST
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನ
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನ   

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿದ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ ಜಿಲ್ಲೆಯ ಕೆಲವರಲ್ಲಿ ಮಂದಹಾಸ ಮೂಡಿಸಿದರೆ, ಬಹುತೇಕರಲ್ಲಿ ಎಂದಿನ ಬೇಸರವನ್ನೇ ತರಿಸಿದೆ.

ಬಜೆಟ್‌ನಲ್ಲಿ ಈ ಬಾರಿ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ₨100 ಕೋಟಿ, ಬಾಗೇಪಲ್ಲಿಯ ಪಾತಪಾಳ್ಯದ ಗಂಟ್ಲಮಲ್ಲಮ್ಮ ಕಣಿವೆ ಬಳಿ ಆಣೆಕಟ್ಟು ನಿರ್ಮಾಣಕ್ಕೆ ₨20 ಕೋಟಿ, ಹೊಸ ಕ್ರೀಡಾ ವಸತಿ ಶಾಲೆ ಆರಂಭ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳ ಪತ್ತೆ ಮಾಡುವ ಯಂತ್ರಗಳ ಮಂಜೂರು ಸೇರಿದಂತೆ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರವನ್ನು ಹೊಸ ತಾಲ್ಲೂಕು ಆಗಿ ರಚನೆ ಮಾಡುವ ಘೋಷಣೆಗಳು ಕೇಳಿಬಂದಿವೆ.

ದಶಕದ ಹಿಂದೆ ಚಿಕ್ಕಬಳ್ಳಾಪುರವನ್ನು ನೂತನ ಜಿಲ್ಲೆಯಾಗಿ ಘೋಷಿಸಿದ್ದ ಕುಮಾರಸ್ವಾಮಿ ಅವರು ಈ ಬಜೆಟ್‌ನಲ್ಲಿ ಜಿಲ್ಲೆಗೆ ಮತ್ತಷ್ಟು ಅನುಕೂಲ ಕಲ್ಪಿಸಿಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರು ಚಾತಕ ಪಕ್ಷಿಗಳಂತಾಗಿದ್ದರು. ಆದರೆ ನಿರೀಕ್ಷೆ ತಕ್ಕ ಪ್ರತಿಫಲ ಈ ಆಯವ್ಯಯದಿಂದ ದಕ್ಕಲಿಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ.

ADVERTISEMENT

ಸದಾ ಅಭಿವೃದ್ಧಿಯ ಕನವರಿಕೆಯಲ್ಲಿಯೇ ಇರುವ ಜಿಲ್ಲೆಯ ಜನರು ‘ಶಾಶ್ವತ ನೀರಾವರಿ’ ಎನ್ನುವ ಪದವನ್ನು ನಿದ್ದೆಯಲ್ಲೂ ಬಡಬಡಿಸುತ್ತಾರೆ. 1,500 ಅಡಿ ಕೊರೆದರೂ ಜೀವಜಲ ಉಕ್ಕದ ಈ ಭಾಗಕ್ಕೆ ತುರ್ತಾಗಿ ಶಾಶ್ವತವಾಗಿ ನೀರು ಒದಗಿಸುವ ಯೋಜನೆ ಬೇಕು ಎನ್ನುವುದು ಪಕ್ಷಾತೀತವಾಗಿ ಎಲ್ಲರ ಒತ್ತಾಯ.

ಕಳೆದ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕುಮಾರಸ್ವಾಮಿ ಅವರು ಬಯಲು ಸೀಮೆ ಜಿಲ್ಲೆಗಳಿಗೆ 60 ಟಿಎಂಸಿ ನೀರು ಹರಿಸುವುದಾಗಿ ಘೋಷಿಸಿದ್ದನ್ನು ಮರೆತಿರದ ಜಿಲ್ಲೆಯ ಜನರು ಈ ಬಜೆಟ್‌ನಲ್ಲಿ ಆ ವಿಚಾರವಾಗಿ ಸರ್ಕಾರದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಎದುರು ನೋಡುತ್ತಿದ್ದರು. ಆದರೆ ಆ ಬಗ್ಗೆ ಮುಖ್ಯಮಂತ್ರಿ ಅವರು ತಮ್ಮ ಎರಡನೇ ಬಜೆಟ್‌ನಲ್ಲಿ ಸಹ ಪ್ರಸ್ತಾಪಿಸದಿರುವುದು ಭಾರಿ ನಿರಾಸೆಯ ಜತೆಗೆ ಆಕ್ರೋಶ ಮೂಡಿಸಿದೆ.

ಎತ್ತಿನಹೊಳೆ ಯೋಜನೆಗಾಗಿ ಈ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆಯಾಗಿಲ್ಲ. ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಬಯಲು ಸೀಮೆಯ ಮೂರು ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ ಮುಖ್ಯವಾಗಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಎನ್ನುವುದು ಬಹುತೇಕರ ಆಗ್ರಹವಾಗಿತ್ತು. ಅದು ಈ ಬಜೆಟ್‌ನಲ್ಲಿ ಸಹ ಪ್ರಸ್ತಾಪವಾಗದೆ ಹೋದದ್ದು ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ತೀವ್ರ ಆಘಾತ ಮೂಡಿಸಿದೆ.

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈ ಬಜೆಟ್‌ನಲ್ಲಾದರೂ ಅನುದಾನ ಸಿಗಲಿದೆ ಎಂದು ಜನಪ್ರತಿನಿಧಿಗಳು ಸೇರಿದಂತೆ ಅನೇಕರ ನಿರೀಕ್ಷೆಯಾಗಿತ್ತು. ಅದು ಸಹ ಹುಸಿಯಾಗಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಜಿಲ್ಲೆಯಲ್ಲಿ ಮೊಬೈಲ್ ಫೋನ್‌ಗಳ ಬಿಡಿಭಾಗಗಳ ಘಟಕ ಸ್ಥಾಪನೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಂಶಗಳು ಬಜೆಟ್‌ನಲ್ಲಿ ಕೇಳಿ ಬರಲಿಲ್ಲ.

ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಬಯಲು ಸೀಮೆ ಭಾಗದ ನೀರಿನ ಭದ್ರತೆಗಾಗಿ ಬಯಲು ಸೀಮೆ ಜಿಲ್ಲೆಗಳಿಗೆ 60 ಟಿಎಂಸಿ ಅಡಿ ನೀರು ಹರಿಸುತ್ತೇನೆ ಎಂದು ಹೇಳಿದ್ದರು. ಆ ವಿಚಾರವನ್ನು ಈ ಬಜೆಟ್‌ನಲ್ಲಿ ಸಹ ಅವರು ಮರೆತಿದ್ದಾರೆ.

ಮುಖ್ಯಮಂತ್ರಿ ಅವರು ತಮ್ಮ ಬಜೆಟ್‌ನಲ್ಲಿ ಎಲ್ಲಿಯೂ ಬಯಲು ಸೀಮೆಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದು ಉಲ್ಲೇಖಿಸದಿರುವುದು ಜಿಲ್ಲೆಯ ಜನರಿಗೆ ಭಾರಿ ನಿರಾಸೆ ಉಂಟು ಮಾಡಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಿಂಥೇಟಿಕ್‌ ಟ್ರ್ಯಾಕ್ ನಿರ್ಮಾಣ ಮಾಡಬೇಕು ಎನ್ನುವುದು ಜಿಲ್ಲೆಯ ಕ್ರೀಡಾಪಟುಗಳ ಅನೇಕ ವರ್ಷಗಳ ಒಕ್ಕೋರಲಿನ ಒತ್ತಾಯ. ಆ ಬಗ್ಗೆ ಸಹ ಬಜೆಟ್‌ನಲ್ಲಿ ಯಾವುದೇ ಉಲ್ಲೇಖ ಇಲ್ಲದಿರುವುದು ಸಹಜವಾಗಿಯೇ ಕ್ರೀಡಾ ಕ್ಷೇತ್ರದವರಿಗೆ ಬೇಸರ ತರಿಸಿದೆ.

ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಸ್ಥಾಪನೆ ಈ ಭಾಗದ ಬಹುಸಂಖ್ಯಾತ ಜನರ ಮತ್ತೊಂದು ಪ್ರಮುಖ ಬೇಡಿಕೆ. ದ್ರಾಕ್ಷಿ, ಟೊಮ್ಯಾಟೊ ಸೇರಿದಂತೆ ವಿವಿಧ ತರಕಾರಿಗಳು ಬೆಲೆ ಕಳೆದುಕೊಂಡಾಗ ಸ್ಥಳೀಯವಾಗಿ ಅವುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಬಹುದು. ಜತೆಗೆ ಉದ್ಯೋಗ ಸೃಷ್ಟಿಸಬಹುದು ಎನ್ನುವುದು ಹಣ್ಣು, ತರಕಾರಿ ಬೆಳೆಗಾರರ ಪ್ರತಿಪಾದನೆ. ಆದರೆ ಅವರ ಬೇಡಿಕೆಗೆ ಈ ಬಾರಿ ಕೂಡ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಬೇಸರ ಆ ಬೆಳೆಗಾರರಲ್ಲಿ ಮೂಡಿದೆ.

ಬಜೆಟ್‌ನಲ್ಲಿ ಈ ಬಾರಿ ‘ಭಾರಿ’ ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಜನರು, ಕಳೆದ ಬಾರಿಯ ಆಯವ್ಯಯಕ್ಕೆ ಹೋಲಿಸಿಕೊಂಡು ಇದು ನಮಗೆ ‘ಮೂಗಿಗೆ ತುಪ್ಪ ಸವರುವ ಬಜೆಟ್’ ಎಂದು ಬೇಸರ ಹೊರಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.