ADVERTISEMENT

ರಾಜ್ಯ ದಿವಾಳಿ, ಖಜಾನೆಯಲ್ಲಿ ಹಣವಿಲ್ಲ: ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್

ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮೇ 2025, 15:20 IST
Last Updated 19 ಮೇ 2025, 15:20 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್ ಮಾತನಾಡಿದರು   

ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ದಿವಾಳಿಯಾಗಿದೆ. ಖಜಾನೆಯಲ್ಲಿ ಹಣವಿಲ್ಲ. ಇಂತಹ ಸಮಯದಲ್ಲಿ ಹೊಸಪೇಟೆಯಲ್ಲಿ ಕಾಂಗ್ರೆಸ್‌ನವರು ಸಾಧನಾ ಸಮಾವೇಶ ನಡೆಸಲು ಹೊರಟಿದ್ದಾರೆ’ ಎಂದು ಬಿಜೆಪಿ ರಾಜ್ಯ  ವಕ್ತಾರ ಚಂದ್ರಶೇಖರ್ ಎಚ್.ಎನ್ ವಾಗ್ದಾಳಿ ನಡೆಸಿದರು. 

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಗಳು ನಡೆಯುತ್ತಿಲ್ಲ. ಯಾವುದೇ ಇಲಾಖೆಗಳಿಗೂ ಅನುದಾನ ದೊರೆಯುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಸಮಾವೇಶ ಮಾಡಲು ಮುಂದಾಗಿದೆ ಎಂದರು.

ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಪೊಲೀಸ್ ಠಾಣೆಗಳಿಗೆ ಕಲ್ಲು ತೂರಾಟ ನಡೆಯುವ ಸ್ಥಿತಿ ಬಂದಿದೆ.  ನಾಲಾಯಕ್ ಗೃಹ ಸಚಿವರು ಎಂದು ಟೀಕಿಸಿದರು.

ADVERTISEMENT

ರಾಜ್ಯ ಸರ್ಕಾರ ಮತಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಿದೆ. ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಸೇನಾ ಕಾರ್ಯಾಚರಣೆಯನ್ನೇ ಅವಮಾನಿಸುವ ರೀತಿ ಮಾತನಾಡುತ್ತಾರೆ. ಇದು ಕಾಂಗ್ರೆಸ್‌ನ ದೇಶ ವಿರೋಧಿ ಮನಸ್ಥಿತಿ ತೋರುತ್ತದೆ ಎಂದರು.

ರಾಜ್ಯದಲ್ಲಿ 6,380 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.‌ ಶೇ 30ರಿಂದ 40ರಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ದುರಸ್ತಿಗೆ ಬಂದಿದ್ದು ಅವುಗಳ ರಿಪೇರಿ ಆಗಿಲ್ಲ. ಮಕ್ಕಳ ಅಪೌಷ್ಟಿಕತೆ ನಿವಾರಣೆಗೂ ಸರ್ಕಾರ ಮುಂದಾಗಿಲ್ಲ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಹಣ ನೀಡಿಲ್ಲ ಎಂದು ದೂರಿದರು.

ಗ್ಯಾರಂಟಿ ಯೋಜನೆಗಳಿಗೆ ₹ 52 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎನ್ನುತ್ತಾರೆ. ಆದರೆ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ₹ 14,500 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎರಡು ವರ್ಷದಿಂದ ಇಲಾಖೆಗಳಿಗೆ ಯಾವುದೇ ಅನುದಾನ ನೀಡಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ 56 ಕಲ್ಯಾಣ ಯೋಜನೆಗಳು ಜಾರಿಯಾಗಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ಈ ಎಲ್ಲದಕ್ಕೂ ತಿಲಾಂಜಲಿ ನೀಡಿದೆ ಎಂದರು.

ಅಭಿವೃದ್ಧಿ ಶೂನ್ಯವಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಮತ್ತು ಸಚಿವರೇ ಹೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಧನ‌ ಸಮಾವೇಶ ಅರ್ಥ ಹೀನ. ಪೆಹಲ್ಗಾಮ್ ಘಟನೆಯ ಬಗ್ಗೆ ಕಾಂಗ್ರೆಸ್ ಪಾಕಿಸ್ತಾನದ ಪರವಾಗಿ ಮಾತನಾಡುವ ಮನಸ್ಥಿತಿ ಹೊಂದಿದೆ. ಇವರು‌ ನಿಜವಾದ ದೇಶದ್ರೋಹಿಗಳು ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳಿ ಕೆ.ಬಿ., ಕಾರ್ಯದರ್ಶಿ ಅಶೋಕ್,  ದೇವಸ್ಥಾನ ಹೊಸಹಳ್ಳಿ ರಾಮಣ್ಣ, ಮಧುಚಂದ್ರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. 

‘ಪ್ರದೀಪ್ ಈಶ್ವರ್ ಮತ್ತೆ ಗೆಲ್ಲುವುದಿಲ್ಲ’

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತೆ ಯಾವುದೇ ಕಾರಣಕ್ಕೂ ಶಾಸಕರಾಗಿ ಆಯ್ಕೆ ಆಗುವುದಿಲ್ಲ. ಶಾಸಕರೇ ಹಿಂದೆ ಮುಂದೆ ನೂರಾರು ಮಂದಿ ಪೊಲೀಸರನ್ನು ಇಟ್ಟುಕೊಂಡು ಓಡಾಡುವರು ಎಂದರೆ ರಾಜ್ಯದ ಜನ ಸಾಮಾನ್ಯರ ಸ್ಥಿತಿ ಏನು ಎಂದು ಚಂದ್ರಶೇಖರ್ ಪ್ರಶ್ನಿಸಿದರು. ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.