ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವಲ್ಲಿ ಬಳಿ ನಡೆದ ಜಿಲೆಟಿನ್ ಸ್ಫೋಟ ದುರಂತಕ್ಕೆ ಕಲ್ಲು ಗಣಿಗಾರಿಕೆ, ಅಕ್ರಮ ಸ್ಫೋಟಕಗಳ ಸಾಗಾಟವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಹಿರೇನಾಗವಲ್ಲಿ, ವರ್ಲಕೊಂಡ, ಆದೇಗಾರಹಳ್ಳಿ, ಮುತುಕದಹಳ್ಳಿ, ಮಾರನಾಯಕನಹಳ್ಳಿ ಪೇರೆಸಂದ್ರ ಸುತ್ತಮುತ್ತ ಸುತ್ತಮುತ್ತ ಸುಮಾರು 50ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು, ಕ್ರಷರ್‌ಗಳಿವೆ. ಅವುಗಳಲ್ಲಿ ಅರ್ಧದಷ್ಟು ಪರವಾನಗಿ ಹೊಂದಿದ್ದರೆ, ಉಳಿದವು ಅನಧಿಕೃತವಾಗಿವೆ. ಈ ಭಾಗದಲ್ಲಿ ರಾತ್ರೋರಾತ್ರಿ ಕಲ್ಲು ಗಣಿಗಾರಿಕೆ ನಡೆಸಿ ಸ್ಫೋಟಿಸಲಾಗುತ್ತದೆ. ಸ್ಫೋಟದ ತೀವ್ರತೆಗೆ ಭಾರಿ ಸದ್ದು ಕೇಳಿಸುತ್ತದೆ’ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.
‘ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚಾಗಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಇದರ ವಿರುದ್ಧ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲೆಟಿನ್ ಸ್ಫೋಟಕ ಸರಬರಾಜು ಕಾನೂನಿನಡಿ ಬರುತ್ತದೆ. ಹಾಗಾಗಿ ಸರ್ಕಾರದ ವೈಫಲ್ಯಕ್ಕೆ ದುರಂತಕ್ಕೆ ಪ್ರಮುಖ ಕಾರಣ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ
ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಆರೋಪಿಸಿದರು.
ಜಿಲ್ಲೆಯಲ್ಲಿ ಮರಳು ಖಾಲಿಯಾದ ಮೇಲೆ ಅಕ್ರಮವಾಗಿ ಕ್ವಾರಿಗಳನ್ನು ನಡೆಸಲಾಗುತ್ತಿದೆ. ಅಕ್ರಮ ಕ್ರಷರ್‌ಗಳ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲಾಗುತ್ತಿದೆ. ಕ್ರಷರ್‌ಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುತ್ತಿಲ್ಲ. ಪ್ರಕರಣ ಕುರಿತು ಸೂಕ್ತ
ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ‘ಅಕ್ರಮವಾಗಿ ಜಿಲೆಟಿನ್ ದಾಸ್ತಾನು ಮಾಡಲಾಗಿದೆ. ಇಲ್ಲಿ ಸ್ಫೋಟಕಗಳ ಬಳಕೆಗೆ ಸಂಬಂಧಿಸಿ ತಜ್ಞರ ಮಾರ್ಗಸೂಚಿಯನ್ನು ಪಾಲಿಸಲಾಗಿಲ್ಲ. ಹಾಗಾಗಿ ದುರಂತ ನಡೆದಿದೆ. ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.