ADVERTISEMENT

ಗ್ರಾ.ಪಂ.ನಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿ: ನಳಿನ್ ಕುಮಾರ್ ಕಟೀಲ್ ಕರೆ

ಕಾರ್ಯಕರ್ತರು, ಮುಖಂಡರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ಕರೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 2:09 IST
Last Updated 30 ನವೆಂಬರ್ 2020, 2:09 IST
ನಳಿನ್ ‌ಕುಮಾರ್ ಕಟೀಲ್
ನಳಿನ್ ‌ಕುಮಾರ್ ಕಟೀಲ್   

ಚಿಕ್ಕಬಳ್ಳಾಪುರ: ‘ಗ್ರಾಮ ಪಂಚಾಯಿತಿಯಿಂದ ದೆಹಲಿವರೆಗೆ ಅಧಿಕಾರ ಹಿಡಿಯುವ ಸೂತ್ರವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಅದರ ಅನ್ವಯ ಕಾರ್ಯ ನಿರ್ವಹಿಸಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಈಗ ಹೀನಾಯ ಸ್ಥಿತಿಯಲ್ಲಿದೆ. ಇಂಥ ಸನ್ನಿವೇಶದಲ್ಲಿ ಪಕ್ಷವನ್ನು ಉತ್ತಮವಾಗಿ ಸಂಘಟಿಸಬೇಕು. ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅನುಕಂಪ ಆಧಾರವಾಗಬಾರದು. ಸಂಘಟನೆಯ ಬಲವೇ ಮುಖ್ಯವಾಗಬೇಕು’ ಎಂದರು.

‘ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸಲೆಂದೇ ಗ್ರಾಮ ಸ್ವರಾಜ್‌ ಅಭಿಯಾನ ರೂಪಿಸಲಾಗಿದೆ. ಕಾರ್ಯಕರ್ತರು ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಜ್ಜಾಗಬೇಕು. ಮೂಲ ಬಿಜೆಪಿಗರು, ವಲಸಿಗರ ನಡುವೆ ಯಾವುದೇ ಗೊಂದಲವಿಲ್ಲ. ನಿಗಮ, ಮಂಡಳಿ ವಿಚಾರದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುತ್ತಿದ್ದೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಈ ಬಾರಿ ಸುಮಾರು 5,000 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಬೇಕು ಎನ್ನುವುದು ನಮ್ಮ ಗುರಿ. ಚುನಾವಣೆ ಯಾವುದೇ ಸಂದರ್ಭದಲ್ಲಿ ನಡೆಯಬಹುದು. ಅದರಲ್ಲಿ ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು’ ಎಂದು ಹೇಳಿದರು.

‘ಬಿಜೆಪಿ ಕಾರ್ಯಕರ್ತರು, ಮುಖಂಡರು ಸಭೆ ನಡೆಸಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ, ಗೆಲುವಿಗೆ ಶ್ರಮಿಸಬೇಕು. ಈ ಜಿಲ್ಲೆಯಲ್ಲಿ 157 ಗ್ರಾಮ ಪಂಚಾಯಿತಿ, 2,800 ಸದಸ್ಯರು ಇದ್ದಾರೆ. ಈ ಚುನಾವಣೆಗೆ ಪಕ್ಷದ ಕಾರ್ಯಕರ್ತರು ವಿಶೇಷ ಆದ್ಯತೆ ಕೊಡಬೇಕು’ ಎಂದು ತಿಳಿಸಿದರು.

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ, ಸಂಸದ ಮುನಿಸ್ವಾಮಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್‌ ತೆಂಗಿನಕಾಯಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ. ರಾಮಲಿಂಗಪ್ಪ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.