ADVERTISEMENT

ಚಿಂತಾಮಣಿ: ಕೃಷಿ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 5:59 IST
Last Updated 9 ಜುಲೈ 2022, 5:59 IST
ಪವಿತ್ರಾ
ಪವಿತ್ರಾ   

ಚಿಂತಾಮಣಿ: ತಾಲ್ಲೂಕಿನ ಕುರುಬೂರು ಕೃಷಿ ಮತ್ತು ರೇಷ್ಮೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಗುರುವಾರ ರಾತ್ರಿ ಹಾಸ್ಟೆಲ್‌ ಕೊಠಡಿಯಲ್ಲಿ ಪ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಎಸ್‌ಸಿ ಕೃಷಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿನಿ ಪವಿತ್ರಾ (21) ಆತ್ಮಹತ್ಯೆ ಮಾಡಿಕೊಂಡವರು.

ವಿದ್ಯಾರ್ಥಿನಿಲಯದ ಪ್ರತಿ ಕೊಠಡಿಯಲ್ಲಿ ಮೂವರು ವಿದ್ಯಾರ್ಥಿನಿಯರು ಇರುತ್ತಾರೆ. ಪರೀಕ್ಷೆ ನಡೆಯುತ್ತಿರುವುದರಿಂದ ಉಳಿದ ಇಬ್ಬರು ವಿದ್ಯಾರ್ಥಿನಿಯರು ಓದಿಕೊಳ್ಳಲು ಬೇರೆ ಕೊಠಡಿಗೆ ತೆರಳಿದ್ದರು. ಆ ಸಮಯದಲ್ಲಿ ಪವಿತ್ರಾ ಒಬ್ಬರೇ ಕೊಠಡಿಯಲ್ಲಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆಸೇರಿದ ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ADVERTISEMENT

ಚಿಕ್ಕಬಳ್ಳಾಪುರ ತಾಲ್ಲೂಕಿನ ಬನ್ನಿಕುಪ್ಪೆ ನಿವಾಸಿ ಪವಿತ್ರಾ ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತೆ ಆಗಿದ್ದರು. ಗುರುವಾರ ರಾತ್ರಿ 9 ಗಂಟೆಗೆ ದೂರವಾಣಿ ಮೂಲಕ ಮನೆಯವರೊಂದಿಗೆ ಮಾತನಾಡಿದ್ದರು. ರಾತ್ರಿ 12ಕ್ಕೆ ಸಾವಿನ ಸುದ್ದಿ ತಿಳಿಯಿತು ಎಂದು ಪೋಷಕರು ತಿಳಿಸಿದ್ದಾರೆ.

‘ಆತ್ಮಹತ್ಯೆ ಘಟನೆಯನ್ನು ವಿಡಿಯೊ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಆಕೆಯ ಮೊಬೈಲ್‌ ಲಾಕ್ ಆಗಿದೆ. ಇದರಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ’ ಎಂದು ಪವಿತ್ರಾ ತಾಯಿ ಶುಭಾಷಿಣಿ ತಿಳಿಸಿದ್ದಾರೆ.

‘ಯಾರೊ ಒಬ್ಬ ಮಗಳಿಗೆ ಕರೆ ಮಾಡಿ ಪ್ರೀತಿಸುವಂತೆ ಸತಾಯಿಸುತ್ತಿದ್ದನಂತೆ. ಈ ವಿಚಾರವನ್ನು ನನ್ನ ಪತ್ನಿ ನನಗೆ ತಿಳಿಸಿದಳು. ನನ್ನ ಮಗಳಿಗೆ ಫೋನ್ ಮಾಡಿ ತೊಂದರೆ ಕೊಟ್ಟಿರುವುದು ಅಥವಾ ಬೇರೆ ಯಾವುದೋ ರೀತಿಯಲ್ಲಿ ತೊಂದರೆ ಕೊಟ್ಟಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಬಂಧಿಸಿದವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ವಿದ್ಯಾರ್ಥಿನಿಯ ತಂದೆಶ್ರೀನಾಥ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಮೊಬೈಲ್ ನಂಬರ್ ಸಹ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.