ADVERTISEMENT

ವಿದ್ಯಾರ್ಥಿಗಳು ಸಂವಿಧಾನದ ಪರಿಕಲ್ಪನೆ ಅರಿಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 8:11 IST
Last Updated 15 ಜುಲೈ 2022, 8:11 IST
ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನ ಮಾಡಲು ಸಿದ್ಧರಾದ ವಿದ್ಯಾರ್ಥಿಗಳು
ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನ ಮಾಡಲು ಸಿದ್ಧರಾದ ವಿದ್ಯಾರ್ಥಿಗಳು   

ಗೌರಿಬಿದನೂರು: ತಾಲ್ಲೂಕಿನ ‌ಅಲಕಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಶಾಲಾ ಸಂಸತ್ ರಚನಾ ಪ್ರಕ್ರಿಯೆಗಾಗಿ ಚುನಾವಣೆ ನಡೆಯಿತು.

ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತದಾನ ಮಾಡುವ ಮೂಲಕ ತಮ್ಮ ಸ್ನೇಹಿತರು ಕೂಡ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದರು.

ಎರಡು ದಿನಗಳಿಂದ ಶಾಲಾ ಸಂಸತ್ ರಚನೆ ಮಾಡಿಕೊಳ್ಳಲು ಚುನಾವಣಾ ಪ್ರಕ್ರಿಯೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ತಾವು ತಯಾರಿಸಿಕೊಂಡಿರುವ ಅಜೆಂಡಾವನ್ನು ಇತರೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಮತ ನೀಡುವಂತೆ ಕೋರಿದರು. ಶಾಲಾ ಆವರಣದಲ್ಲಿ ಸೇರಿದ್ದ ಮಕ್ಕಳು ಸಾಲುಗಟ್ಟಿ ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ಪ್ರದರ್ಶಿಸುವ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.

ADVERTISEMENT

10ನೇ ತರಗತಿ ವಿದ್ಯಾರ್ಥಿನಿ ಅತೀಪಾ ಮಾತನಾಡಿ, ‘ಚುನಾವಣೆ ಎಂಬುದು ಪ್ರಜಾಪ್ರಭುತ್ವದಲ್ಲಿ ಸರ್ಕಾರ ರಚನೆ ಮಾಡಿಕೊಳ್ಳಲು ನಡೆಯುವಂತಹ ಪ್ರಕ್ರಿಯೆಯಾಗಿದೆ. ಇದರಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕರು ಪಾಲ್ಗೊಂಡು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಮತ್ತು ವಿಶ್ವಾಸವಿಟ್ಟು ಸಮಾಜದಲ್ಲಿನ ಎಲ್ಲಾ ಜಾತಿ, ವರ್ಗದ ಜನರನ್ನು ಸಮಾನವಾಗಿ ಕಾಣುವಂತಹ ವ್ಯಕ್ತಿಗೆ ಮತ ಚಲಾಯಿಸಬೇಕು. ಇದರ ಪರಿಕಲ್ಪನೆ ಶಾಲಾ ಹಂತದಿಂದಲೇ ರೂಪಿಸುವ ಉದ್ದೇಶದಿಂದ ಶಾಲಾ ಸಂಸತ್ ರಚನೆ ಮಾಡಿ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದರು.

10ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ಮಾತನಾಡಿ, ‘ದೇಶದ ಅಭಿವೃದ್ಧಿಗಾಗಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಜನರು ಮತ ಚಲಾಯಿಸುತ್ತಾರೆ. ಅದೇ ರೀತಿ ಶಾಲಾ ಸಂಸತ್ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರೊಂದಿಗೆ ಸೇರಿಕೊಂಡು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ’ ಎಂದು ಹೇಳಿದರು.

ಮುಖ್ಯಶಿಕ್ಷಕರಾದ ಪದ್ಮಪ್ರಭ ಮಾತನಾಡಿ, ‘ಇಲಾಖೆಯ ನಿಯಮದಂತೆ ಶಾಲಾ ಸಂಸತ್ ರಚಿಸಲಾಗಿದೆ. ಚುನಾವಣೆಗಳನ್ನು ಏಕೆ ಮಾಡುತ್ತಾರೆ, ಹೇಗೆ ನಡೆಯುತ್ತವೆ, ಚುನಾವಣೆಯಲ್ಲಿ ಆಯ್ಕೆಯಾಗಿ ಬರುವವರು ಮಾಡಬೇಕಾಗಿರುವ ಕೆಲಸಗಳೇನು ಎನ್ನುವ ಕುರಿತು ಮಾಹಿತಿ, ಅಗತ್ಯ ತರಬೇತಿ ಮತ್ತು ಜಾಗೃತಿ ಮೂಡಿಸಲಾಗಿದೆ. ಇದರಿಂದ ‌ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ಥಳೀಯ ‌ಚುನಾವಣೆಗಳನ್ನು ಎದುರಿಸಿ ಉತ್ತಮ‌ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಶಿಕ್ಷಕರಾದ ಉಮಾಶಂಕರ್, ನಂಜುಂಡರಾವ್, ಇಂತಿಯಾಜ್ ಅಹಮದ್, ಎ. ಗಂಗಾಧರಯ್ಯ, ಎಸ್.ಬಿ. ವೀಣಾ, ಪುಷ್ಪಲತಾ, ಎನ್. ಸುಮಲತಾ, ಬಿ.ಎನ್. ನಂದಾ, ಶ್ರೀನಿವಾಸಪ್ಪ, ಚಿಕ್ಕಣ್ಣ ಚುನಾವಣಾ ಮತಗಟ್ಟೆಯ ವಿವಿಧ ಹಂತದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.