ಚಿಕ್ಕಬಳ್ಳಾಪುರ: ತಾಲ್ಲೂಕಿನ ತಿಪ್ಪೇನಹಳ್ಳಿಯ ಸರ್ಕಾರಿ ಶಾಲೆ ದಾಖಲಾತಿಯಲ್ಲಿ ಕೇವಲ ಐವರು ಮಕ್ಕಳು ಕೊರತೆ ಇದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಈ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ತಿಪ್ಪೇನಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಮತ್ತು ಅವರ ಪೋಷಕರು ಸೋಮವಾರ ಬೀದಿಗಿಳಿದು ಹೋರಾಟ ನಡೆಸಿದರು.
ಮುಖ್ಯಮಂತ್ರಿಯಿಂದ ಶಾಸಕರವರೆಗೆ, ಶಿಕ್ಷಣ ಇಲಾಖೆ ಆಯುಕ್ತರಿಂದ ಬಿಇಒವರೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಬೊಬ್ಬೆ ಹೊಡೆಯುತ್ತಾರೆ. ಆದರೆ ಅದೇ ಸರ್ಕಾರಿ ಶಾಲೆಗಳನ್ನು ಉಳಿಸುವ ಬದಲು ಅವರೇ ನಿರ್ನಾಮ ಮಾಡುವತ್ತ ಹೆಜ್ಜೆ ಇಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ಪೋಷಕರು ದೂರಿದರು.
1–7ನೇ ತರಗತಿವರೆಗಿನ ಈ ಶಾಲೆಯಲ್ಲಿ ಒಟ್ಟು 56 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ 61 ಮಕ್ಕಳು ಇರುವ ಶಾಲೆಯಲ್ಲಿ ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು. ಆದರೆ, ಈ ಸರ್ಕಾರಿ ಶಾಲೆಯಲ್ಲಿ ನಿಯಮ ಪಾಲನೆಯಾಗಲು ಐದು ಮಕ್ಕಳ ಕೊರತೆ ಇದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಿ, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಉಳಿದ ಅರ್ಧ ಶೈಕ್ಷಣಿಕ ವರ್ಷಕ್ಕೆ ಅತ್ಯಗತ್ಯವಾಗಿ ಬೇಕಿರುವ ಇಂಗ್ಲೀಷ್ ಶಿಕ್ಷಕರನ್ನೇ ವರ್ಗಾವಣೆ ಮಾಡಲಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ಮಕ್ಕಳ ಜೊತೆಗೆ ಪೋಷಕರೂ ಪ್ರತಿಭಟನೆ ನಡೆಸಿದರು.
ಮುಸ್ಟೂರ್ ಶ್ರೀಧರ್ ಮಾತನಾಡಿ, ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ತೀರ್ಮಾನದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಸರ್ಕಾರಿ ಶಾಲೆಗಳಲ್ಲಿ ಬಡವರು, ದಲಿತರು, ಹಿಂದುಳಿದವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಶಾಲೆಗಳಲ್ಲಿ ಶಿಕ್ಷಕರಿಲ್ಲದಿದ್ದರೆ, ಆ ಮಕ್ಕಳು ಕಲಿಯುವುದಾದರೂ ಏನು ಎಂದು ಪ್ರಶ್ನಿಸಿದರು.
ಬಡ ಕೂಲಿ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಾರೆ. ಇಂತಹ ಸರ್ಕಾರಿ ಶಾಲೆಯಲ್ಲಿ ಓದಿದ ಹಲವರು ಉನ್ನತ ಸ್ಥಾನಕ್ಕೆ ಏರಿದ್ದಾರೆ. 1ರಿಂದ 4ರವರೆಗೆ ಒಂದೇ ಕೊಠಡಿ, 4ರಿಂದ 7ರವರೆಗೆ ತಲಾ ಒಂದು ಕೊಠಡಿಯಲ್ಲಿ ಪಾಠ ಕಲಿಯುವ ಅವಸ್ಥೆಯಿದೆ. ಕಳಪೆ ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಭವಿಷ್ಯ ಹಾಳಾಗಲಿದೆ. ಮಕ್ಕಳಿಗೆ ಅನುಕೂಲವಾಗುವಂತೆ ಶಿಕ್ಷಕರನ್ನು ನೇಮಿಸಬೇಕು. ಆದರೆ, ಶಿಕ್ಷಣ ಇಲಾಖೆ ಈ ಕಾರ್ಯ ಮಾಡುತ್ತಿಲ್ಲ. ಇದೇ ವರ್ತನೆ ಮುಂದುವರಿದರೆ ಮಕ್ಕಳೊಂದಿಗೆ ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ವರ್ಗಾಯಿಸಲಾಗಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ಇಂಗ್ಲೀಷ್ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದ್ದು, ಇಲ್ಲಿ ಕಲಿಯುತ್ತಿರುವ ಮಕ್ಕಳ ಗತಿಯೇನು ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಯೋಚಿಸಬೇಕು. ಆದರೆ, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು, ಶಾಲಾ ಸಮಯದಲ್ಲಿ ಹೋರಾಟ ಮಾಡಿದರೆ, ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.
ಶಾಲಾ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಹಾಕಿರುವ ಟ್ರಾನ್ಸ್‌ಫಾರ್ಮರ್ ತೆಗೆಸಲು ಬಿಇಒ, ಡಿಡಿಪಿಐ ಅವರಿಗೆ ಆಗಲಿಲ್ಲ. ಆ ಕೆಲಸಕ್ಕೆ ಗ್ರಾಮಸ್ಥರು ಬೇಕಿತ್ತು. ಆದರೆ, ಇದೀಗ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ. ಈ ಎಲ್ಲ ಅವಾಂತರಗಳಿಗೆ ಮುಖ್ಯಶಿಕ್ಷಕರೇ ಕಾರಣ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಇಒ ಕಾರಿಗೆ ಮುತ್ತಿಗೆ; ನಡೆದುಹೋದ ಅಧಿಕಾರಿ
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು ಬಿಇಒ ಸುಕನ್ಯಾ ಅವರು ಸ್ಥಳಕ್ಕಾಗಮಿಸಿದರು. ಈ ವೇಳೆ ಶಾಲೆಯಲ್ಲಿ ಮಕ್ಕಳ ಕೊರತೆ ಇದೆ. ಹೀಗಾಗಿ ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ನಿಯಮಾನುಸಾರ ಇಲಾಖೆಯಿಂದ ವರ್ಗಾವಣೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗೆ ಶಿಕ್ಷಕರನ್ನು ಕಳುಹಿಸಲಾಗುತ್ತದೆ. ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದರೆ ಹೆಚ್ಚುವರಿ ಶಿಕ್ಷಕರನ್ನು ಕರೆಸಿಕೊಳ್ಳಲಾಗುವುದು ಎಂದು ತಮ್ಮ ಕ್ರಮ ಸಮರ್ಥಿಸಿಕೊಂಡರು. ಇದರಿಂದ ಕ್ರೋಧಗೊಂಡ ಮಕ್ಕಳು ಬಿಇಒ ಅವರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಇದರಿಂದ ಸುಕನ್ಯಾ ಅವರು ಅನಿವಾರ್ಯವಾಗಿ ಕಾರು ಅಲ್ಲಿಯೇ ಬಿಟ್ಟು ಕಾಲ್ನಡಿಗೆಯಲ್ಲಿ ಹೊರಟರು. ಶಿಕ್ಷಕರ ವರ್ಗಾವಣೆ ರದ್ದು ಮಾಡುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮಕ್ಕಳು ಮತ್ತು ಪೋಷಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಜೊತೆಗೆ ಈ ಕುರಿತು ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳಿಗೂ ದೂರು ನೀಡುವುದಾಗಿ ಪೋಷಕರು ತಿಳಿಸಿದ್ದಾರೆ.
ಶಾಲಾ ಅಭಿವೃದ್ಧಿ: ಜನಪ್ರತಿನಿಧಿಗಳು ವಿಫಲ
ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಕರ ವರ್ಗಾವಣೆ ಆದೇಶವನ್ನು ಸರ್ಕಾರವು ತಕ್ಷಣವೇ ಹಿಂಪಡೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪೋಷಕರು ಹೇಳಿದರು. ಮುಂದಿನ ವರ್ಷದ ಶಿಕ್ಷಣಿಕ ವರ್ಷದಲ್ಲಿ ಮಕ್ಕಳ ಕೊರತೆ ಸರಿಪಡಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತೇವೆ. ಆದರೆ ಈಗ ಇಂಗ್ಲೀಷ್ ಶಿಕ್ಷಕರ ವರ್ಗಾವಣೆ ಮಾಡಿದ್ದರಿಂದ ಮುಂದಿನ ವರ್ಷ ಈ ಶಾಲೆಗೆ 20 ಮಕ್ಕಳು ದಾಖಲಾಗುವುದು ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂಗ್ಲೀಷ್ ಕಲಿಸದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ದುಸ್ಥಿತಿ ಬರಲಿದೆ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.