ADVERTISEMENT

ಚಿಕ್ಕಬಳ್ಳಾಪುರದಲ್ಲಿ ಬಿಎಸ್‌ಪಿ ಪರ ರೋಡ್ ಶೋ

ನಗರದಲ್ಲಿ ಬಿಎಸ್ಪಿ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಪರ ರೋಡ್‌ ಶೋದಲ್ಲಿ ಬಿಎಸ್ಪಿ ರಾಜ್ಯ ಘಟಕದ ಸಂಯೋಜಕ ಮಾರಸಂದ್ರ ಮುನಿಯಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:56 IST
Last Updated 1 ಡಿಸೆಂಬರ್ 2019, 14:56 IST
ರೋಡ್ ಶೋದಲ್ಲಿ ಬಿಎಸ್ಪಿ ರಾಜ್ಯ ಘಟಕದ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿದರು.
ರೋಡ್ ಶೋದಲ್ಲಿ ಬಿಎಸ್ಪಿ ರಾಜ್ಯ ಘಟಕದ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ದೇಶದಲ್ಲಿ ಬಡತನ, ನಿರುದ್ಯೋಗ, ಸೇರಿದಂತೆ ಹಲವು ಸಮಸ್ಯೆಗಳು ತಾಂಡವಾಡುತ್ತಿವೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಆದ್ದರಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ವಚ್ಚ ರಾಜಕೀಯ ವ್ಯವಸ್ಥೆ ನಿರ್ಮಾಣಕ್ಕೆ ಮತದಾರರು ಬಹುಜನ ಸಮಾಜ ಪಕ್ಷವನ್ನು (ಬಿಎಸ್ಪಿ) ಬೆಂಬಲಿಸಬೇಕು’ ಎಂದು ಬಿಎಸ್ಪಿ ರಾಜ್ಯ ಘಟಕದ ಸಂಯೋಜಕ ಮಾರಸಂದ್ರ ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೋಡ್ ಶೋದಲ್ಲಿ ಮಾತನಾಡಿ ಅವರು, ‘ದೇಶದಲ್ಲಿ ಕಾಂಗ್ರೆಸ್‌ ಪಕ್ಷವು 60 ವರ್ಷಗಳವರೆಗೆ ಆಳ್ವಿಕೆ ನಡೆಸಿದೆ. ಸಾಮಾನ್ಯವಾಗಿ ರಾಜಪ್ರಭುತ್ವದಲ್ಲಿ ಇದನ್ನು ಕಾಣಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 50 ವರ್ಷಗಳವರೆಗೆ ಒಂದೇ ಪಕ್ಷಕ್ಕೆ ಮತ ನೀಡಿದ್ದಾರೆ ಎಂದರೆ ಆ ಪ್ರಭುತ್ವ ಚಲನಶೀಲತೆಯಿಂದ ಕೂಡಿಲ್ಲ ಎಂದರ್ಥ. ನಿಂತ ಪ್ರಜಾಪ್ರಭುತ್ವದಿಂದ ಪರಿಣಾಮಕಾರಿ ಬದಲಾವಣೆಗಳು ಕಂಡುಬರುವುದಿಲ್ಲ. ರಾಜಕೀಯ ವ್ಯವಸ್ಥೆ ನಿಂತ ನೀರಾದರೆ ಸಾಮಾಜಿಕ, ಆರ್ಥಿಕ ವ್ಯವಸ್ಥೆಯೂ ಸ್ಥಗಿತಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸುಧಾಕರ್ ಅವರು ₹200 ಕೋಟಿಗೆ ತಮ್ಮ ಶಾಸಕ ಸ್ಥಾನವನ್ನು ಮಾರಾಟ ಮಾಡಿಕೊಂಡು ಮತದಾರರಿಗೆ ಮೋಸ ಮಾಡಿದ್ದಾರೆ ಹಾಗೂ ಉಪ ಚುನಾವಣೆ ಎದುರಾಗಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಸುಧಾಕರ್ ಮತ್ತು ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರರು ಇವರ ಸುಳ್ಳು ಮಾತಿಗೆ ಜನ ಮರುಗಳಾಗಬೇಡಿ ಸುಳ್ಳು ಹೇಳುವವರಿಗೆ, ಮೋಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಬೇಡಿ. ಕೋಮುವಾದಿ ಬಿಜೆಪಿ. ಬಂಡವಾಳ ಶಾಹಿ ಕಾಂಗ್ರೆಸ್ ಮತ್ತು ಪಕ್ಷ ಕುಟುಂಬ ರಾಜಕಾರಣದ ಜೆಡಿಎಸ್ ತಿರಸ್ಕರಿಸಿ ಸಮಾನತೆಗಾಗಿ ಶ್ರಮಿಸುತ್ತಿರುವ ಬಿಎಸ್ಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಬಿಎಸ್ಪಿ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಮಾತನಾಡಿ, ‘ಕಳೆದ 6 ವರ್ಷಗಳಿಂದ ಒಬ್ಬ ರೈತರಿಗೆ ಸಾಗುವಳಿ ಚೀಟಿ ನೀಡದ ಸುಧಾಕರ್ ಅವರು ನಗರ ನಿವಾಸಿಗಳಿಗೆ ನಿವೇಶನ ಕೊಡುತ್ತಾರಾ? ಇದೆಲ್ಲಾ ಬರೀ ಸುಳ್ಳು ಭರವಸೆಗಳು. ಇದನ್ನು ಮತದಾರರು ನಂಬಿ ಮೋಸ ಹೋಗಬೇಡಿ. ಬಡತನ ತೊಲಗಿಸಿ ದೇಶ ಉಳಿಸಿ ಎಂದು ಇಂದಿರಾಗಾಂಧಿ ಘೋಷಿಸಿದ 50 ವರ್ಷಗಳ ನಂತರವೂ ಬಡತನ ನಿರ್ಮೂಲನೆ ಆಗಿಲ್ಲ. ಬಡತನ ನಿರ್ಮೂಲನೆ ಆಗಬೇಕಾದರೆ ಸಂವಿಧಾನ ಜಾರಿಗೊಳಿಸುವ ಬದ್ದತೆ ಹೊಂದಿರುವ ಬಿಎಸ್ಪಿ ಪಕ್ಷ ಅಧಿಕಾರಕ್ಕೆ ಬರಬೇಕು’ ಎಂದು ಹೇಳಿದರು.

‘ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಗಳು ವಿಜೃಂಬಿಸುತ್ತಿದ್ದಾರೆ. ಮನುವಾದಿಗಳು ರಾಜಕೀಯ ಅಧಿಕಾರ ಹಿಡಿದುಕೊಂಡು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶ ಮಾಡಲು ಹೊರಟಿದ್ದಾರೆ. ಈ ಸಂದರ್ಭದಲ್ಲಿ ಸಂವಿಧಾನದಿಂದಾಗಿ ಹಕ್ಕು ಮತ್ತು ಅಧಿಕಾರ ಪಡೆದುಕೊಂಡಿರುವ ಬಹುಸಂಖ್ಯಾತರು ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಬಂದಿದೆ ಎಲ್ಲಾ ಮತದಾರರು ವಿವೇಚನೆಯಿಂದ ಮತದಾನ ಮಾಡಬೇಕು. ಬಿಎಸ್ಪಿ ಅಧಿಕಾರಕ್ಕೆ ಬಂದರೆ ಕೃಷಿ, ಕೈಗಾರಿಕೆ, ಬೆಳವಣಿಗೆಗೆ ಶ್ರಮಿಸಲಿದೆ. ಸ್ಥಳಿಯ ಸಮಸ್ಯೆಗಳಾದ ನೀರು, ಉದ್ಯೋಗ ಒದಗಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಬಿಎಸ್ಪಿ ರಾಜ್ಯ ಘಟಕದ ಉಸ್ತುವಾರಿಗಳಾದ ದಿನೇಶ್ ಗೌತಮ್, ರಮೇಶ್ ಭಾರತಿ ಕರ್ದಂ, ಉಪಾಧ್ಯಕ್ಷ ಕೆ.ಬಿ.ವಾಸು, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ವಿ.ನಾಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಅಪ್ಸರ್ ಪಾಷಾ, ಉಪಾಧ್ಯಕ್ಷರಾದ ಬಾಗೇಪಲ್ಲಿ ವೆಂಕಟೆಶ್, ದೇವಪ್ಪ, ಜಿಲ್ಲಾ ಸಂಯೋಜಕ ಎಂ.ಮುನಿಕೃಷ್ಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಎಂ ಮುನಿಕೃಷ್ಣಪ್ಪ, ನಂದಿಗುಂದ ವೆಂಟೇಶ್, ಕಾರ್ಯದರ್ಶಿ ಕೆ.ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.