ADVERTISEMENT

ಚಿಕ್ಕಬಳ್ಳಾಪುರ| ನಗರದಲ್ಲಿ ತಲ್ಲಣ ಮೂಡಿಸಿದ ಬ್ಯಾಗ್‌ಗಳು

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಾಲ್ಕು ಬ್ಯಾಗ್‌ಗಳು ಪತ್ತೆ, ಆತಂಕದಿಂದ ತಪಾಸಣೆಗೆ ಮುಂದಾದವರಿಗೆ ಕಂಡಿದ್ದು ಗುಟ್ಕಾ, ತಂಬಾಕು ಪ್ಯಾಕೆಟ್‌ಗಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 15:57 IST
Last Updated 22 ಜನವರಿ 2020, 15:57 IST
ನಿಲ್ದಾಣದಲ್ಲಿ ಪತ್ತೆಯಾದ ಬ್ಯಾಗ್‌ಗಳನ್ನು ಪರಿಶೀಲಿಸುತ್ತಿರುವ ಶ್ವಾನದಳ ತಂಡ
ನಿಲ್ದಾಣದಲ್ಲಿ ಪತ್ತೆಯಾದ ಬ್ಯಾಗ್‌ಗಳನ್ನು ಪರಿಶೀಲಿಸುತ್ತಿರುವ ಶ್ವಾನದಳ ತಂಡ   

ಚಿಕ್ಕಬಳ್ಳಾಪುರ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ ಪ್ರಕರಣ ಹಸಿರಿರುವಾಗಲೇ ಬುಧವಾರ ಮಧ್ಯಾಹ್ನ ನಗರದ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ವಾರಸುದಾರರಿಲ್ಲದ ನಾಲ್ಕು ಬ್ಯಾಗ್‌ಗಳು, ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿ ನಗರದಲ್ಲಿ ತಲ್ಲಣ ಮೂಡಿಸುವ ಜತೆಗೆ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿದ್ದವು.

ಬಸ್‌ ನಿಲ್ದಾಣದ ಫ್ಲಾಟ್‌ಫಾರ್ಮ್‌ ಸಂಖ್ಯೆ 6 ರಲ್ಲಿ ನಾಲ್ಕು ಆಸನಗಳ ಕೆಳಗೆ ತಲಾ ಒಂದರಂತೆ ಇಡಲಾಗಿದ್ದ ಬ್ಯಾಗ್‌ಗಳನ್ನು ಬಹಳ ಹೊತ್ತಾದರೂ ಯಾರೂ ತೆಗೆದುಕೊಂಡು ಹೋಗದೆ ಇದ್ದಾಗ ಪ್ರಯಾಣಿಕರಲ್ಲೇ ಕೆಲವರು ಈ ವಿಚಾರವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತಂದರು.

ಈ ವಿಷಯ ತಿಳಿದು ಪೊಲೀಸರು ಶ್ವಾನದಳ, ವಿಧ್ವಂಸಕ ಕೃತ್ಯ ತಪಾಸಣಾ ತಂಡಗಳ ಸಿಬ್ಬಂದಿಯೊಂದಿಗೆ ನಿಲ್ದಾಣಕ್ಕೆ ದೌಡಾಯಿಸುತ್ತಿದ್ದಂತೆ ನಿಲ್ದಾಣದ ಚಿತ್ರಣವೇ ಬದಲಾಗಿ ಹೋಯಿತು.

ADVERTISEMENT

ನಿಲ್ದಾಣದಲ್ಲಿದ್ದ ನೂರಾರು ಪ್ರಯಾಣಿಕರ ಜತೆಗೆ ವಿಷಯ ತಿಳಿದು ಸ್ಥಳೀಯರು ಕೂಡ ನಿಲ್ದಾಣಕ್ಕೆ ಧಾವಿಸಿ ದೂರದಲ್ಲಿ ನಿಂತು ಬ್ಯಾಗಿನತ್ತಲೇ ಆತಂಕದ ದೃಷ್ಟಿ ನೆಟ್ಟಿದ್ದರು. ಮುಂದೆ ಏನಾಗುವುದೋ ಎಂದು ಭಯ, ತಲ್ಲಣದಿಂದ ಮುತ್ತಿಗೆ ಹಾಕುತ್ತಿದ್ದವರನ್ನು ದೂರ ಸರಿಸಿದ ಪೊಲೀಸರು ಮೊದಲು ಬ್ಯಾಗ್‌ಗಳನ್ನು ಶ್ವಾನ ಮತ್ತು ಲೋಹ ಶೋಧಕ ಉಪಕರಣಗಳಿಂದ ತಪಾಸಣೆ ನಡೆಸಿದರು. ನಂತರ ಉದ್ದನೆಯ ಕಟ್ಟಿಗೆ ಕೋಲಿನ ಸಹಾಯದಿಂದ ಒಂದೊಂದಾಗಿ ಬ್ಯಾಗ್‌ಗಳನ್ನು ನಿಲ್ದಾಣದಲ್ಲಿ ನಿರ್ಜನವಾದ ಮೂಲೆಗೆ ಸಾಗಿದರು.

ಅಷ್ಟರಲ್ಲಾಗಲೇ ಈ ಸುದ್ದಿ ಬಸ್‌ ನಿಲ್ದಾಣದಲ್ಲಿ ಸ್ಫೋಟಕ ತುಂಬಿದ ಬ್ಯಾಗ್‌ಗಳು ಪತ್ತೆ ಎಂದು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಗರದ ತುಂಬೆಲ್ಲ ಹಬ್ಬಿತ್ತು. ಪರಿಣಾಮ, ನಿಲ್ದಾಣದ ಜನರ ದಂಡು ಹರಿದು ಬರಲು ಶುರುವಾಗಿತ್ತು. ಬಂದವರೆಲ್ಲರ ಕಣ್ಣು ದೂರ ಮೂಲೆಗೆ ಸಾಗಿಸಿಟ್ಟ ಬ್ಯಾಗ್‌ಗಳತ್ತ ನೆಟ್ಟಿದ್ದವು.

ಬಾಂಬ್ ನಿಷ್ಕ್ರೀಯ ತಂಡದ ಪರಿಣಿತರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಜತೆಗೆ ನಿಧಾನವಾಗಿ ಒಂದೊಂದೇ ಬ್ಯಾಗ್‌ ತೆರೆದು ನೋಡಿದಾಗ ಅವುಗಳಲ್ಲಿ ಗುಟ್ಕಾ, ತಂಬಾಕು ಪ್ಯಾಕೆಟ್‌ಗಳು ತುಂಬಿದ್ದು ಕಂಡುಬಂತು. ಅಲ್ಲಿಯವರೆಗೆ ಮುಖದಲ್ಲಿ ಆತಂಕ ತುಂಬಿಕೊಂಡು ದೂರದಲ್ಲಿ ನಿಂತವರೆಲ್ಲ ನಿಟ್ಟುಸಿರುವ ಬಿಡುವ ಜತೆಗೆ ಮುಸಿಮುಸಿ ನಗಲು ಆರಂಭಿಸಿದರು.

ಬ್ಯಾಗ್‌ಗಳನ್ನು ಪರಿಶೀಲಿಸಿದ ಪೊಲೀಸ್‌ ಅಧಿಕಾರಿಗಳು ಅವುಗಳಲ್ಲಿ ಯಾವುದೇ ರೀತಿಯ ಸ್ಫೋಟಕ ಪದಾರ್ಥಗಳು ಇಲ್ಲ ಎಂದು ಖಚಿತವಾಗುತ್ತಿದ್ದಂತೆ ಬ್ಯಾಗ್‌ಗಳು ವಶಕ್ಕೆ ಪಡೆದುಕೊಂಡರು. ಈ ಬ್ಯಾಗ್‌ಗಳು ಯಾರಿಗೆ ಸೇರಿವೆ? ಯಾಕೆ ನಿಲ್ದಾಣದಲ್ಲಿ ಬಿಟ್ಟು ಹೋದರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.