ADVERTISEMENT

ಚಿಕ್ಕಬಳ್ಳಾಪುರ | ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 13:24 IST
Last Updated 29 ಜುಲೈ 2024, 13:24 IST
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಚಿಕ್ಕಬಳ್ಳಾಪುರದಲ್ಲಿ ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟದ ಸದಸ್ಯರು  ಪ್ರತಿಭಟಿಸಿದರು 
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಚಿಕ್ಕಬಳ್ಳಾಪುರದಲ್ಲಿ ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟದ ಸದಸ್ಯರು  ಪ್ರತಿಭಟಿಸಿದರು    

ಚಿಕ್ಕಬಳ್ಳಾಪುರ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.

ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಸಚಿವರ ರಾಜೀನಾಮೆಯನ್ನು ಸರ್ಕಾರ ಪಡೆದಿದೆ. ಪ್ರಕರಣ ದೇಶದಲ್ಲಿಯೇ ಕರ್ನಾಟಕದ ಜನರು ತಲೆ ತಗ್ಗಿಸುವಂತೆ ಮಾಡಿದೆ. ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯು ಹಗರಣವನ್ನು ಬಯಲುಗೊಳಿಸಿತು. ನಿಗಮದ ಅಧಿಕಾರಿಗಳು, ದಲ್ಲಾಳಿಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣದ ಹೊಣೆರುವಂತೆ ಆಗಿದೆ. ಪರಿಶಿಷ್ಟರ ಕಲ್ಯಾಣದ ಹಣವು ಕಾಂಗ್ರೆಸ್‌ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಬಳಸಲಾಗಿದೆ. ಇದನ್ನು ಮುಖ್ಯಮಂತ್ರಿ ಲಘುವಾಗಿ ಪರಿಗಣಿಸಿದ್ದಾರೆ. ತಮ್ಮ ಸಹೋದ್ಯೋಗಿ ಸಚಿವರಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ತಮ್ಮ ತಲೆದಂಡ ತಪ್ಪಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ.

ADVERTISEMENT

ತನ್ನ ಮೂಗಿದ ಅಡಿಯಲ್ಲಿ ನಡೆದಿರುವ ಹಗರಣಕ್ಕೆ ನೈತಿಕ ಹೊಣೆ ಹೊರಬೇಕು. ಸಭಾಧ್ಯಕ್ಷರು ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣದ ದುರುಪಯೋಗವು ನೇರವಾಗಿ ಮುಖ್ಯಮಂತ್ರಿಯಿಂದಲೇ ಅಥವಾ ಅವರ ನಿರ್ದೇಶನದಲ್ಲೇ ನಡೆದಿದೆ ಎನ್ನುವುದು ನಿರ್ವಿವಾದ. ಪಂಚಮರ ಹಣವನ್ನು ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿರುವುದನ್ನು ಮುಖ್ಯಮಂತ್ರಿ ಅವರೇ ಒಪ್ಪಿಕೊಂಡಿದ್ದಾರೆ.

ಪರಿಶಿಷ್ಟರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನ ಮತ್ತು ವಿದೇಶಿ ವಿದ್ಯಾರ್ಥಿ ವೇತನ ಕಡಿತಗೊಳಿಸುವ ಮೂಲಕ ಮುಖ್ಯಮಂತ್ರಿ ದಲಿತ ದ್ರೋಹಿಯಾಗಿದ್ದಾರೆ. ಈ ಕಾರಣದಿಂದ ಒಕ್ಕೂಟವು ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸುತ್ತಿದೆ. ಇಲ್ಲದಿದ್ದರೆ ಶೀಘ್ರದಲ್ಲಿಯೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಭಾಸ್ಕರ್ ಅವರ ಮೂಲಕ ರಾಜ್ಯಪಾಲರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ, ಜಿಲ್ಲಾ ಅಧ್ಯಕ್ಷ ಜಿ.ಈಶ್ವರಪ್ಪ, ಜಿಲ್ಲಾ ಗೌರವಾಧ್ಯಕ್ಷ ನಾರಾಯಣಪ್ಪ, ಮುನಿನಾರಾಯಣಪ್ಪ, ಒ್ರಕಾಶ್, ಶ್ರೀನಿವಸ್, ರಾಮಕೃಷ್ಣ, ಟಿ.ಆರ್.ಕೃಷ್ಣ, ಕೃಷ್ಣಪ್ಪ, ಶ್ರೀನಿವಾಸ್, ದೇವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.