ADVERTISEMENT

ಸ್ವಾಮಿ ವಿವೇಕಾನಂದರ ಸಹೋದರತ್ವಕ್ಕೆ ಗಂಡಾಂತರ :ಹೈಕೋರ್ಟ್ ವಕೀಲ ಎನ್.ಅನಂತನಾಯಕ್

ವಿಷ್ಣು ಪ್ರಿಯಾ ಕಾಲೇಜಿನಲ್ಲಿ ಎನ್‍ಎಸ್‌ಯುಐ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 16:34 IST
Last Updated 21 ಜನವರಿ 2020, 16:34 IST
ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಎನ್.ಅನಂತನಾಯಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಎನ್.ಅನಂತನಾಯಕ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಸ್ವಾಮಿ ವಿವೇಕಾನಂದರು ಜಾತಿ, ಧರ್ಮ, ಗಡಿಗಳನ್ನು ಮೀರಿದ ಸಹೋದರ ಭಾವನೆಗಳನ್ನು ವಿಶ್ವಕ್ಕೆ ಪರಿಚಯಿಸಿದದರು. ಆದರೆ ಇವತ್ತು ಕೆಲ ಸಂಕುಚಿತ ಮೂಲಭೂತವಾದಿಗಳು ವಿವೇಕಾನಂದರ ಸಹೋದರತ್ವ ಗುಣಗಳಿಗೆ ಗಂಡಾಂತರ ತರುತ್ತಿದ್ದಾರೆ. ದೇಶದ ಐಕ್ಯತೆ ಮತ್ತು ಭಾವೈಕ್ಯತೆಯನ್ನು ಉಳಿಸುವ ಜವಾಬ್ದಾರಿ ಯುವಜನರು ನಿಭಾಯಿಸಬೇಕಿದೆ’ ಎಂದು ಹೈಕೋರ್ಟ್ ವಕೀಲ ಎನ್.ಅನಂತನಾಯಕ್ ಹೇಳಿದರು.

ನಗರದ ವಿಷ್ಣು ಪ್ರಿಯಾ ಕಾಲೇಜಿನಲ್ಲಿ ಮಂಗಳವಾರ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‌ಯುಐ) ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಶ್ನಿಸುವ ಅಧ್ಯಾತ್ಮ ಕಲಿಸಿದ ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಮಾದರಿಯಾಗಲಿ. ಕಠಿಣ ಪರಿಶ್ರಮ, ಬದ್ಧತೆ ಮತ್ತು ತ್ಯಾಗದಿಂದ ಮಾತ್ರ ಒಳ್ಳೆಯದನ್ನು ಸಾಧಿಸಲು ಸಾಧ್ಯ. ಅಪಮಾನದ ಮಧ್ಯೆ ಜಗತ್ತಿಗೆ ಬೆಳಕಾದ ಅಂಬೇಡ್ಕರ್, ತ್ಯಾಗದ ಪ್ರತೀಕವಾದ ಭಗತ್ ಸಿಂಗ್ ಯುವಜನರಿಗೆ ಮಾದರಿಯಾಗಬೇಕು. ಅವರ ಬದುಕು, ಹೋರಾಟ ನಮಗೆಲ್ಲಾ ಸ್ಪೂರ್ತಿಯಾಗಲಿ. ಸಾಮರಸ್ಯದ ಸಮಾಜ ನಿರ್ಮಿಸಲು ಆಂದೋಲನ ಬಲಗೊಳ್ಳಲಿ’ ಎಂದು ತಿಳಿಸಿದರು.

ADVERTISEMENT

‘ದೇಶದ ಜನಸಂಖ್ಯೆಯಲ್ಲಿ ಶೇ52 ರಷ್ಟು ಯುವಜನರಿದ್ದಾರೆ. ಸರ್ಕಾರಗಳು ಇವರಿಗೆಲ್ಲ ಉತ್ತಮ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಇವತ್ತು ಜಾತಿ, ಧರ್ಮದ ಗಲಭೆಗಳಿಗೆ ಯುವಜನರನ್ನು ಗುರಾಣಿಯನ್ನಾಗಿ ಮಾಡಲಾಗುತ್ತಿದೆ. ಸಂಕುಚಿತ ಮನೋಭಾವದ ಯುವಜನ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇದು ವಿಷಾದನಿಯ’ ಎಂದರು.

‘ಕೌಶಲಗಳಿಲ್ಲದ ಪದವಿ, ಉದ್ಯೋಗ ಭದ್ರತೆ ಇಲ್ಲದ ತರಬೇತಿಯನ್ನು ನೀಡಲಾಗುತ್ತಿದೆ. ದಿವಾಳಿಯಂಚಿನ ಕೃಷಿಯಲ್ಲಿಯಲ್ಲಿ ತೊಡಗಲಾರದೆ, ಭದ್ರ ಉದ್ಯೋಗ ಇಲ್ಲದೆ ಯುವಜನರು ಅತಂತ್ರ ಸ್ಥಿತಿಯಲ್ಲಿದಾರೆ. ಇಂದಿನ ಯುವಜನರು ತ್ಯಾಗ, ಪರಿಶ್ರಮದಿಂದ ಸಾಧನೆಯತ್ತ ಸಾಗಬೇಕಿದೆ. ವೈಯಕ್ತಿಕ ಬದುಕು ಕಟ್ಟಿಕೊಳ್ಳುತ್ತಲೇ ಸಾಮಾಜಿಕ ಅನಿಷ್ಟಗಳ ವಿರುದ್ಧ ಸೆಣಸಾಡಲು ಅಣಿಯಾಗಬೇಕು’ ಎಂದು ಹೇಳಿದರು.

ಎನ್‍ಎಸ್‌ಯುಐ ರಾಜ್ಯ ಘಟಕದ ಸಂಚಾಲಕ ಕುಂದಲಗುರ್ಕಿ ಮುನಿಂದ್ರ, ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ರೆಡ್ಡಿ, ಯುವ ಮುಖಂಡರಾದ ಕೃಷ್ಣಪ್ಪ, ನಟರಾಜು, ಮನೋಹರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.