
ಶಿಡ್ಲಘಟ್ಟ: ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಗೋಮಾಳ ಸರ್ವೆ ನಂಬರ್ 29ರ ವಿವಾದಿತ ಜಮೀನಿಗೆ ತಹಶೀಲ್ದಾರ್ ಎನ್.ಗಗನ ಸಿಂಧು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರೊಂದಿಗೆ ಚರ್ಚಿಸಿದರು.
ಬಶೆಟ್ಟಹಳ್ಳಿ ಹೋಬಳಿಗೆ ಸೇರಿದ ಸರ್ವೆ ನಂಬರ್ 29ರಲ್ಲಿ 23 ಗುಂಟೆ ಗೋಮಾಳ ಜಮೀನಿನಲ್ಲಿ ದಲಿತರು ನಿವೇಶನ ನೀಡುವಂತೆ 2017-18ರಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ್ದರು. ನಂತರ ಅನೇಕ ಹಂತದ ಹೋರಾಟ, ಪ್ರತಿಭಟನೆ ನಡೆಸಲಾಗಿತ್ತು.
ಇದೀಗ ಉಪ ವಿಭಾಗಾಧಿಕಾರಿ ಆದೇಶದಂತೆ ತಹಶೀಲ್ದಾರ್ ಎನ್.ಗಗನ ಸಿಂಧು ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಜಿಲ್ಲಾಧಿಕಾರಿ ವರದಿ ನೀಡುವುದಾಗಿ ತಿಳಿಸಿದರು.
ಸರ್ವೆ ನಂಬರ್ 29ರಲ್ಲಿನ 23 ಗುಂಟೆ ಗೋಮಾಳದಲ್ಲಿ ಬೇರೊಬ್ಬರು ಒತ್ತುವರಿ ಇದ್ದರು. ದಲಿತರಿಗೆ ನಿವೇಶನ ಇಲ್ಲದ ಕಾರಣ ನಿವೇಶನ ನೀಡುವಂತೆ 2017ರಿಂದಲೂ ನಾವು ಹೋರಾಟ ನಡೆಸಿಕೊಂಡು ಬಂದಿದ್ದೆವು. ಒತ್ತುವರಿದಾರರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಾದರೂ ಅಲ್ಲಿ ಅವರ ವಿರುದ್ಧ ತೀರ್ಪು ಬಂದಿದ್ದು ನಿವೇಶನ ರಹಿತ ದಲಿತರಿಗೆ ನಿವೇಶನ ವಿತರಿಸುವಂತೆ ನ್ಯಾಯಾಲಯ ತೀರ್ಪು ನೀಡಿದ ಕಾರಣ ಎ.ಸಿ ಅವರ ಸೂಚನೆಯಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ನೀಡಲು ಆಗಮಿಸಿದ್ದರು. ನಮ್ಮ ಹಲವು ವರ್ಷಗಳ ಹೋರಾಟಕ್ಕೆ ಜಯ ದೊರೆತಿದೆ ಎಂದು ಕದಸಂಸ ಜಿಲ್ಲಾ ಸಂಚಾಲಕ ದಢಂಘಟ್ಟ ತಿರುಮಲೇಶ್ ಹೇಳಿದರು.
ಬಶೆಟ್ಟಹಳ್ಳಿ ಹೋಬಳಿ ಕಂದಾಯ ನಿರೀಕ್ಷಕ ಅಮರೇಂದ್ರ, ಗ್ರಾಮ ಆಡಳಿತಾಧಿಕಾರಿ ನಗಧರ್, ಕುರುಬರಹಳ್ಳಿ ಮಣಿಕುಮಾರ್, ಎ.ಎಲ್.ನಾರಾಯಣಸ್ವಾಮಿ, ಸಿ.ವಿ.ವೆಂಕಟೇಶ್, ದೇವರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.