ADVERTISEMENT

ಶಿಕ್ಷಕರ ನಿಯೋಜನೆಗೆ ಒತ್ತಾಯಿಸಿ ಪ್ರತಿಭಟನೆ

ಮುಸ್ಟೂರು ಗ್ರಾಮದ ಸರ್ಕಾರಿ ಶಾಲೆಗೆ ಸೌಕರ್ಯ ಒದಗಿಸಲು ಪಟ್ಟು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:36 IST
Last Updated 17 ಆಗಸ್ಟ್ 2025, 5:36 IST
ಚಿಕ್ಕಬಳ್ಳಾಪುರದ ಮುಸ್ಟೂರು ಗ್ರಾಮಸ್ಥರು ಸರ್ಕಾರಿ ಶಾಲೆಗೆ ಶಿಕ್ಷಕರ ನಿಯೋಜನೆ ಮಾಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು
ಚಿಕ್ಕಬಳ್ಳಾಪುರದ ಮುಸ್ಟೂರು ಗ್ರಾಮಸ್ಥರು ಸರ್ಕಾರಿ ಶಾಲೆಗೆ ಶಿಕ್ಷಕರ ನಿಯೋಜನೆ ಮಾಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು   

ಚಿಕ್ಕಬಳ್ಳಾಪುರ: ನಗರಕ್ಕೆ ಹೊಂದಿಕೊಂಡಿರುವ ಮುಸ್ಟೂರು ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಕರ ನಿಯೋಜನೆ, ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಶನಿವಾರ ಶಾಲಾ ಮಕ್ಕಳೊಂದಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮುಖಂಡ ಮುಸ್ಟೂರು ಶ್ರೀಧರ್ ಮಾತನಾಡಿ, ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 84ಕ್ಕೂ ಹೆಚ್ಚು ಬಡಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ 7ನೇ ತರಗತಿವರೆಗೆ ಪಾಠಮಾಡಲು ಮುಖ್ಯಶಿಕ್ಷಕರು ಇದ್ದರು. ಇದೀಗ ಮುಖ್ಯಶಿಕ್ಷಕರು ವಯೋನಿವೃತ್ತಿ ಹೊಂದಿದ್ದು, ಅವರ ಬದಲಿಗೆ ಮತ್ತೊಬ್ಬರನ್ನು ನೇಮಿಸುವ ಬದಲು, ಇರುವ 4 ಶಿಕ್ಷಕರಲ್ಲಿ ಒಬ್ಬರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದರು.

ಇರುವ ಮೂವರು ಶಿಕ್ಷಕರು 1ರಿಂದ 5ನೇ ತರಗತಿಯವರೆಗಿನ ಮಕ್ಕಳು ಹಾಗೂ 6, 7ನೇ ತರಗತಿಯ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಸೇರಿಸಿಕೊಂಡು ಪಾಠ ಮಾಡುತ್ತಿದ್ದು, ಇದರಿಂದ ಮಕ್ಕಳ ಶೈಕ್ಷಣಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಬಡಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ನೇಮಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಸರ್ಕಾರಗಳು ಸರ್ಕಾರಿ ಶಾಲೆಯನ್ನು ನಿರ್ಲಕ್ಷಿಸುತ್ತಿದೆ. ಇದರಿಂದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಪೋಷಕರು ಸರ್ಕಾರಿ ಶಾಲೆಗಳ ಅವ್ಯವಸ್ಥೆಗಳನ್ನು ಕಂಡು ಸಾಲಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ ಎಂದರು.

ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಿದೆ. ಪ್ರತಿ ತರಗತಿಗೆ ಒಬ್ಬರು ಶಿಕ್ಷಕರಂತೆ ನೇಮಿಸುವ ಜೊತೆಗೆ ಶಾಲೆಗಳ ಅಭಿವೃದ್ಧಿ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು, ಸುಮಿತ್ರ ನಾಗರಾಜ್, ಕಲಾವತಿ, ನಾಗೇಶ್, ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.