ಚಿಂತಾಮಣಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿದ್ದ ಶಿಕ್ಷಕ ವೈ.ವಿ. ರಾಮಕೃಷ್ಣ (58) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ನಿವೃತ್ತಿ ಅಂಚಿನಲ್ಲಿದ್ದರು. ಮೊಬೈಲ್ ಬಳಕೆಯೂ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಸಮೀಕ್ಷಾ ಕಾರ್ಯ ತುಂಬಾ ನಿಧಾನಗತಿಯಲ್ಲಿ ಮಾಡುತ್ತಿದ್ದರು. ನಿತ್ಯದ ಸಮೀಕ್ಷಾ ಸಾಧನೆ ಕಡಿಮೆಯಾಗಿತ್ತು. ನೋಟಿಸ್ ಕೊಡುವುದಾಗಿ ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದರು. ಸಮೀಕ್ಷೆಯಲ್ಲಿ ನಿಗದಿತ ಗುರಿ ಸಾಧಿಸದಿದ್ದರೆ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂಬ ಸುತ್ತೋಲೆಯಿಂದ ಆತಂಕ, ಗಾಬರಿಗೆ ಒಳಗಾಗಿದ್ದರು. ಈ ಆತಂಕದಿಂದ ಅವರಿಗೆ ಹೃದಯಾಘಾತವಾಗಿದೆ ಎಂದು ಶಿಕ್ಷಕರ ಸಂಘಟನೆಗಳು ಆರೋಪಿಸಿವೆ.
ರಾಮಕೃಷ್ಣ ತಾಲ್ಲೂಕಿನ ಯಗವಕೋಟೆ ಕ್ಲಸ್ಟರ್ ವ್ಯಾಪ್ತಿಯ ದಿಗವಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು.
ಭಾನುವಾರ ಮಧ್ಯಾಹ್ನ 3ರವರೆಗೂ ಮತ್ತೊಬ್ಬ ಶಿಕ್ಷಕರ ನೆರವಿನಿಂದ ಸಮೀಕ್ಷೆ ನಡೆಸಿದ್ದರು. ನಂತರ ಒಬ್ಬರೇ ಸಮೀಕ್ಷೆ ಕಾರ್ಯ ನಡೆಸಿದ್ದರು. ಒತ್ತಡ ಹೆಚ್ಚಾಗಿ ಕೆಲಸ ಮಾಡಲು ಸಾಧ್ಯವಾಗದೆ ಅಸ್ವಸ್ಥಗೊಂಡಿದ್ದಾರೆ.
ತಕ್ಷಣ ಅವರೇ ನಗರದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸುವಷ್ಟರಲ್ಲೇ ಕೊನೆ ಉಸಿರೆಳೆದಿದ್ದಾರೆ.
ಫೋನ್ ಹಾಗೂ ವಾಟ್ಸ್ ಆ್ಯಪ್ ಗೆ ಮಾತ್ರ ಮೊಬೈಲ್ ಬಳಸುತ್ತಿದ್ದರು. ಸಮೀಕ್ಷೆಯ ತಾಂತ್ರಿಕ ತೊಂದರೆಗಳು ಮತ್ತು ಮೊಬೈಲ್ ಬಳಕೆ ತಮಗೆ ಸುಲಭವಾಗಿಲ್ಲ. ಇದರಿಂದ ಸಮೀಕ್ಷೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಮೀಕ್ಷೆ ಆರಂಭವಾದಾಗಿನಿಂದಲೂ ಹೇಳುತ್ತಿದ್ದರು. ನಿತ್ಯ ಕೆಲಸ ಮುಗಿಯುತ್ತಿಲ್ಲ ಎಂದು ಮನೆಯಲ್ಲಿ ಮತ್ತು ಸ್ನೇಹಿತರಲ್ಲಿ ಆತಂಕ ತೋಡಿಕೊಳ್ಳುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.