
ಚಿಂತಾಮಣಿ: ತಾಲ್ಲೂಕಿನ ದೊಡ್ಡಗಂಜೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಹಾಗೂ ಪೋಷಕರು ಮಂಗಳವಾರ ಶಾಲೆ ಮುಂದೆ ಪ್ರತಿಭಟಿಸಿದರು.
ಪ್ರೌಢಶಾಲೆ ಆವರಣದಲ್ಲಿ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯವಿದೆ. ಶಾಲೆಯ ಹತ್ತನೇ ತರಗತಿಯಲ್ಲಿ 57 ವಿದ್ಯಾರ್ಥಿನಿಯರಿದ್ದಾರೆ. ಈ ಪೈಕಿ 50 ಹೆಣ್ಣು ಮಕ್ಕಳು ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿದ್ದಾರೆ.
ಶಾಲೆ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಆಶ್ಲೀಲ ಮತ್ತು ಲೈಂಗಿಕ ದೃಷ್ಟಿಯಲ್ಲಿ ಮಾತನಾಡುತ್ತಾರೆ. ಅವರನ್ನು ಕೂಡಲೇ ವರ್ಗಾಯಿಸಬೇಕು. ಇಲ್ಲದಿದ್ದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆರೋಪಿಸಿ ಪೋಷಕರು ರಸ್ತೆ ತಡೆ ನಡೆಸಿದರು.
ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆ ನಡೆಸಲು ಅವಕಾಶ ಮಾಡಿಕೊಡಲಿಲ್ಲ. ನಂತರ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತ ಶಾಲೆಯ ಎದುರು ಪ್ರತಿಭಟನೆಗೆ ಕುಳಿತರು.
ಮುಖ್ಯ ಶಿಕ್ಷಕರು ಈ ಶಾಲೆಗೆ ಬಂದು 8 ತಿಂಗಳಾಗಿದೆ. ಅವರು ಕರ್ತವ್ಯಕ್ಕೆ ಹಾಜರಾದ ಒಂದು ವಾರದಲ್ಲೇ ಸಮಸ್ಯೆ ಶುರುವಾಯಿತು. ವಿದ್ಯಾರ್ಥಿನಿಯರು ಶೌಚದ ಕೊಠಡಿಗೆ ಹೋದರೆ ಹಿಂಬಾಲಿಸುವುದು, ಮೈಮೇಲೆ ಎಲ್ಲೆಂದರಲ್ಲಿ ಕೈ ಹಾಕುವುದು ಮಾಡುತ್ತಿದ್ದಾರೆ. ಬಂದಾಗಿನಿಂದಲೂ ಇದೇ ರೀತಿ ವರ್ತಿಸುತ್ತಾರೆ. ಈ ವಿಷಯವನ್ನು ಪೋಷಕರ ಸಭೆಯಲ್ಲಿ ಪ್ರಸ್ತಾಪಿಸಿದಾಗ ಕ್ಷಮೆ ಕೋರಿದ್ದಾರೆ.
ಪೋಷಕರು ಊರಿಗೆ ಹೋದ ಕೂಡಲೇ ಮಕ್ಕಳನ್ನು ಬಾಯಿಗೆ ಬಂದಂತೆ ಅಸಭ್ಯ ಮತ್ತು ಆಶ್ಲೀಲವಾಗಿ ನಿಂದಿಸಿದ್ದಾರೆ. ರಾತ್ರಿ ಸಮಯದಲ್ಲಿ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯದಲ್ಲಿ ಅವರು ಏಕೆ ಹೋಗುತ್ತಾರೆ ಎಂದು ಪೋಷಕ ಚೌಡರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪೋಷಕರು ಯಾರಾದರೂ ಪ್ರಶ್ನಿಸಿದರೆ ಏನು ಮಾಡುತ್ತೀರೋ ಮಾಡಿಕೊಳ್ಳಿ. ಇಷ್ಟವಿಲ್ಲದಿದ್ದರೆ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಓದಲು ತೊಂದರೆ ಆಗುತ್ತದೆ ಎಂದು ಸಹಿಸಿಕೊಂಡಿದ್ದೆವು. ಆದರೆ ಮುಖ್ಯ ಶಿಕ್ಷಕನ ವರ್ತನೆ ಬದಲಾಗಲೇ ಇಲ್ಲ. ಪೋಷಕರ ಸಭೆಯಲ್ಲಿ ಕ್ಷಮಾಪಣೆ ಕೇಳುವುದು, ಪೋಷಕರು ಹೋದ ಕೂಡಲೇ ಮಕ್ಕಳ ಮೇಲೆ ಮುಗಿಬೀಳುವುದು ಮಾಡುತ್ತಿದ್ದಾರೆ. ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ದೊರೆಯುವ ಯಾವ ಸೌಲಭ್ಯವನ್ನು ನೀಡುತ್ತಿಲ್ಲ ಎಂದು ದೂರಿದರು.
ಪೋಷಕಿಯರಾದ ಸುಜಾತಾ, ಪ್ರಭಾವತಿ, ವಿದ್ಯಾರ್ಥಿನಿಯರು ಸಹ ಇದೇ ರೀತಿಯಲ್ಲಿ ಆರೋಪಿಸಿ ಮುಖ್ಯ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೋಷಕರಾದ ಪ್ರಭಾವತಿ, ಗಂಗಾಧರಪ್ಪ, ಸುಜಾತ, ಶ್ರೀನಾಥ್, ಬೈರಮ್ಮ, ಶೋಭಾ, ಪವಿತ್ರಾ, ಅಶ್ವಿನಿ, ಶಾಂತಮ್ಮ, ರವಿ, ದೇವರಾಜ್, ಗೋಕುಲ್, ವೆಂಕಟ್, ಶಿವ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಡಿಡಿಪಿಐಗೆ ವರದಿ; ಮುಖ್ಯ ಶಿಕ್ಷಕನಿಗೆ ರಜೆ
ಮುಖ್ಯ ಶಿಕ್ಷಕರ ಅಸಭ್ಯ ವರ್ತನೆ ಬಗ್ಗೆ ಉಪನಿರ್ದೇಶಕರಿಗೆ ವರದಿ ಕಳುಹಿಸಲಾಗುವುದು. ಅವರಿಂದ ಆದೇಶ ಬಂದ ತಕ್ಷಣ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಭರವಸೆ ನೀಡಿದರು. ಆದರೂ ಪ್ರತಿಭಟನಕಾರರು ಪಟ್ಟು ಸಡಿಸಲಿಲ್ಲ. ಮುಖ್ಯ ಶಿಕ್ಷಕರಿಗೆ ಸದ್ಯಕ್ಕೆ ರಜೆಯ ಮೇಲೆ ತೆರಳುವಂತೆ ಆದೇಶಿಸಿದರು. ನಂತರ ಪೋಷಕರು ಹಾಗೂ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.