ಚಿಕ್ಕಬಳ್ಳಾಪುರ: ‘ಗುರುಭವನ ಕಾಮಗಾರಿ ಪೂರ್ಣಗೊಳಿಸಲು ಅನುದಾನ ದೊರಕಿಸಿಕೊಡಿ’– ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರಿಗೆ ಜಿಲ್ಲೆಯ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ನೀಡುತ್ತಲೇ ಇದ್ದಾರೆ. ಆದರೆ ಅರೆಬರೆಯಾಗಿ ನಿಂತಿರುವ ಗುರುಭವನದ ಕಾಮಗಾರಿ ಮಾತ್ರ ಪೂರ್ಣವಾಗುತ್ತಿಲ್ಲ!
ಶಂಕುಸ್ಥಾಪನೆ ನೆರವೇರಿಸಿ ನಾಲ್ಕು ವರ್ಷಗಳು ಸಮೀಪಿಸುತ್ತಿವೆ. ಆದರೂ ಕಾಮಗಾರಿ ಪೂರ್ಣವಾಗಿಲ್ಲ. ಜಿಲ್ಲಾ ಕನ್ನಡ ಭವನದ ಕಾಮಗಾರಿ ಪೂರ್ಣವಾಗಿದೆ. ಈಗ ಗುರು ಭವನದ ಕಾಮಗಾರಿ ಪೂರ್ಣಗೊಳಿಸಿ ಎನ್ನುವ ಮನವಿ ಶಿಕ್ಷಕ ಸಮುದಾಯದ್ದಾಗಿದೆ.
2021ರಲ್ಲಿ ಜಿಲ್ಲಾ ಗುರುಭವನ ಶಂಕುಸ್ಥಾಪನೆ ನಡೆಯಿತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು. ನೆಲ ಮಹಡಿಯ ಕಾಮಗಾರಿ ಪೂರ್ಣವಾಗಿದೆ. ಮೊದಲ ಮಹಡಿ ನಿರ್ಮಾಣಕ್ಕೆ ಫಿಲ್ಲರ್‌ಗಳನ್ನು ಅಳವಡಿಸಲಾಗಿದೆ. ಪೂರ್ಣ ಕಾಮಗಾರಿ ಮುಗಿದು ಬಳಕೆಗೆ ಮುಕ್ತವಾಗುವುದು ಯಾವಾಗ ಎನ್ನುವ ಪ್ರಶ್ನೆ ಶಿಕ್ಷಕರದ್ದಾಗಿದೆ.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಮುಂದಿನ ವರ್ಷದಲ್ಲಿ ಗುರುಭವನ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಜನಪ್ರತಿನಿಧಿಗಳು ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಐದು ವರ್ಷಗಳು ಕಳೆದರೂ ಭವನದ ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ.
₹5 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಶಿಕ್ಷಣ ಇಲಾಖೆಯಿಂದ ₹1 ಕೋಟಿ, ಜಿಲ್ಲಾಡಳಿತದಿಂದ ₹2 ಕೋಟಿ ಮಂಜೂರಾಗಿದೆ. ಉಳಿದ ₹2 ಕೋಟಿಯನ್ನು ಶಾಸಕರು, ಸಂಸದರು ಸೇರಿದಂತೆ ವಿವಿಧ ಅನುದಾನಗಳ ಮೂಲಕ ಭರಿಸಲು ಯೋಜಿಸಲಾಗಿತ್ತು. ಹಣವನ್ನು ಯಾವ ಮೂಲಗಳಿಂದ ತರಬಹುದು ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಸಹ ರೂಪುರೇಷೆಗಳನ್ನು ಸಿದ್ಧ ಮಾಡಿಕೊಂಡಿದ್ದರು.
ಈಗಾಗಲೇ ನಡೆದಿರುವ ಗುರುಭವನ ಕಾಮಗಾರಿಗೆ ₹2 ಕೋಟಿ ಬಿಡುಗಡೆಯಾಗಿದೆ. ಶಿಕ್ಷಣ ಇಲಾಖೆಯಿಂದ ₹50 ಲಕ್ಷ ಮತ್ತು ಜಿಲ್ಲಾಡಳಿತದಿಂದ ₹50 ಲಕ್ಷ ಬಿಡುಗಡೆಗೆ ಬಾಕಿ ಇದೆ. ಜೊತೆಗೆ ಮತ್ತಷ್ಟು ಅನುದಾನವೂ ಕಾಮಗಾರಿ ಪೂರ್ಣಕ್ಕೆ ಅಗತ್ಯವಿದೆ. ಶಂಕುಸ್ಥಾಪನೆಯ ವೇಳೆ ಇದ್ದ ಸಲಕರಣೆಗಳು, ಉತ್ಪನ್ನಗಳ ವೆಚ್ಚ ಮತ್ತು ಈಗಿನ ವೆಚ್ಚಕ್ಕೂ ವ್ಯತ್ಯಾವಿದೆ. ಈ ಕಾರಣದಿಂದ ಕಾಮಗಾರಿ ಪೂರ್ಣಕ್ಕೆ ಮತ್ತಷ್ಟು ಹೆಚ್ಚುವರಿ ಹಣದ ಅಗತ್ಯವೂ ಇದೆ. ಆರಂಭದಲ್ಲಿ ರೂಪಿಸಿರುವ ಡಿಪಿಆರ್ ಮೊತ್ತಕ್ಕೂ ಈಗಿನ ಕಾಮಗಾರಿಗೂ ಬಹಳಷ್ಟು ವ್ಯತ್ಯಾಸಗಳು ಆಗಲಿವೆ.
ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ವಿವಿಧ ತರಬೇತಿಗಳು, ಕಾರ್ಯಾಗಾರ, ಸಭೆ, ಸಂವಾದಗಳು ಹಾಗೂ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ. ಈ ಎಲ್ಲ ಚಟುವಟಿಕೆಗಳನ್ನು ನಡೆಸಲು ಸೂಕ್ತ ಹಾಗೂ ಸಮರ್ಪಕ ಕಟ್ಟಡದ ಸೌಲಭ್ಯ ಸಹ ಇರಲಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಗುರುಭವನ ನಿರ್ಮಿಸಲು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಮುಂದಾಗಿತ್ತು. ಜಡಲತಿಮ್ಮನಹಳ್ಳಿ ಸರ್ವೆ ನಂ 31ರಲ್ಲಿ 20 ಗುಂಟೆ ಜಾಗವೂ ಮಂಜೂರಾಗಿತ್ತು.
‘ಪ್ರಸಕ್ತ ವರ್ಷದ ಶಿಕ್ಷಕರ ದಿನಾಚರಣೆ ವೇಳೆಗಾದರೂ ಭವನದ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮನಸ್ಸು ಮಾಡಬೇಕು. ಜಿಲ್ಲೆಯಲ್ಲಿ 15 ಸಾವಿರ ಶಿಕ್ಷಕರು ಇದ್ದಾರೆ. ಈ ಎಲ್ಲರ ಆಸೆಯೂ ಈಡೇರಿದಂತೆ ಆಗುತ್ತದೆ’ ಎಂದು ಶಿಕ್ಷಣ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.