ADVERTISEMENT

ಅಂಗಡಿ ಹರಾಜು: 28ಕ್ಕೆ ಮುಂದೂಡಿಕೆ

ಶಿಡ್ಲಘಟ್ಟ: ಕಲಾವಕಾಶ ನೀಡುವಂತೆ ಬಾಡಿಗೆದಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮೇ 2020, 11:10 IST
Last Updated 20 ಮೇ 2020, 11:10 IST
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಅಧ್ಯಕ್ಷತೆಯ ಸಭೆಯಲ್ಲಿ ಭಾಗವಹಿಸಿದ್ದವರು
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಅಧ್ಯಕ್ಷತೆಯ ಸಭೆಯಲ್ಲಿ ಭಾಗವಹಿಸಿದ್ದವರು   

ಶಿಡ್ಲಘಟ್ಟ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿಯಿರುವ 5 ಅಂಗಡಿ, ಸಂತೆ ಬೀದಿಯ 13 ಅಂಗಡಿ ಹಾಗೂ ಅಶೋಕ ರಸ್ತೆಯ 4 ಅಂಗಡಿ, ಅಂಚೆ ಕಚೇರಿಯ ರಸ್ತೆಯಲ್ಲಿರುವ ಒಂದು ಅಂಗಡಿ ಸೇರಿದಂತೆ 23 ಅಂಗಡಿಗಳ ಹರಾಜನ್ನು ಮೇ 28ಕ್ಕೆ ಮುಂದೂಡಲಾಗಿದೆ.

ನಗರಸಭೆ ಪೌರಾಯುಕ್ತ ತ್ಯಾಗರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ಹರಾಜು ಏರ್ಪಡಿಸಲಾಗಿತ್ತು. ಜನರು ಸಂಕಷ್ಟದಲ್ಲಿರುವುದರಿಂದ ಹರಾಜು ಮುಂದೂಡಬೇಕೆಂದು ವ್ಯಾಪಾರಿಗಳ ಮನವಿ ಮೇರೆಗೆ ಮುಂದೂಡಲಾಯಿತು.

ಹರಾಜು ಪ್ರಕ್ರಿಯೆ ಮುಂದೂಡಬೇಕು ಎಂದು ಕೆಲವರು ಒತ್ತಾಯಿಸಿದರೆ, ಮತ್ತೆ ಕೆಲವರು ಹರಾಜು ಪ್ರಕ್ರಿಯೆ ನಡೆಯಲೇಬೇಕು ಎಂದು ಹಠ ಹಿಡಿದು ಪರಸ್ಪರ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಎಲ್ಲರನ್ನು ಸಮಾಧಾನಪಡಿಸಿದರು.

ADVERTISEMENT

ಕಳೆದ ಕಲವು ವರ್ಷಗಳಿಂದ ಅದೇ ಅಂಗಡಿಗಳನ್ನು ನಂಬಿ ಜೀವನ ಸಾಗಿಸುತ್ತಿದ್ದೇವೆ. ಇದೀಗ ಏಕಾ ಏಕಿ ಹರಾಜು ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ. ನಮಗೆ ಸ್ವಲ್ಪ ಕಾಲಾವಕಾಶ ನೀಡಿದಲ್ಲಿ ನಾವೇ ಠೇವಣಿ ಹಣವನ್ನು ಕಟ್ಟಿ ಹರಾಜಿನಲ್ಲಿ ಬಾಗವಹಿಸುತ್ತೇವೆ ಎಂದು ಈಗಾಗಲೇ ಅಂಗಡಿಯನ್ನು ಬಾಡಿಗೆ ಪಡೆದವರು ಪಟ್ಟುಹಿಡಿದರು.

ದೂರವಾಣಿ ಮೂಲಕ ಮೇಲಧಿಕಾರಿಗಳೊಂದಿಗೆ ಚರ್ಚಿಸಿದ ಪೌರಾಯುಕ್ತ ತ್ಯಾಗರಾಜ್‌ ಅಧಿಕಾರಿಗಳ ಸೂಚನೆಯಂತೆ ಒಂದು ವಾರದ ಕಲಾವಕಾಶ ನೀಡಲಾಗುತ್ತದೆ ಎಂದರು.

ನಗರಸಭೆ ಸದಸ್ಯರಾದ ಲಕ್ಷ್ಮಯ್ಯ, ಟಿ.ಮಂಜುನಾಥ್, ಎ.ಎಸ್.ನಾರಾಯಣಸ್ವಾಮಿ, ಮೌಲಾ, ಕೃಷ್ಣಮೂರ್ತಿ ಮುಖಂಡರಾದ ಬೆಳ್ಳೂಟಿ ಶ್ರೀರಾಮಣ್ಣ, ಲಕ್ಷ್ಮಿನಾರಾಯಣ, ನಗರಸಭೆ ಸಿಬ್ಬಂದಿ ವೆಂಕಟೇಶ್, ಮಧು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.