ADVERTISEMENT

ಸರ್ಕಾರದ ನಿರ್ಧಾರಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 15:44 IST
Last Updated 17 ಜುಲೈ 2018, 15:44 IST

ಚಿಕ್ಕಬಳ್ಳಾಪುರ: ‘ನೇರ ನೇಮಕಾತಿಯಿಂದಾಗಿ ಕೆಲಸದಿಂದ ತೆಗೆದು ಹಾಕಲಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರರನ್ನು ಕೆಲಸದಲ್ಲಿ ಮುಂದುವರಿಸಲು ಸರ್ಕಾರ ತೆಗೆದುಕೊಂಡ ತೀರ್ಮಾನ ಉತ್ತಮವಾಗಿದೆ’ ಎಂದು ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆಂಜನೇಯರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೇರ ನೇಮಕಾತಿಯಿಂದಾಗಿ ಕೆಲಸದಿಂದ ತೆಗೆದು ಹಾಕಲಾಗಿದ್ದ ನೌಕರರು ಜೂನ್ 27 ರಿಂದ ಜುಲೈ 4ರ ವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಪ್ರತಿಭಟನೆಗೆ ಸ್ಪಂದಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾನವೀಯ ನೆಲೆಯಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ’ ಎಂದು ತಿಳಿಸಿದರು.

‘ಇದೀಗ ಕೆಲಸಕ್ಕೆ ಮರಳಿದ ಹೊರಗುತ್ತಿಗೆ ನೌಕರರು ಕಾಯಂ ನೌಕರರೊಂದಿಗೆ ಸಹಕರಿಸಿ ಕೆಲಸ ಮಾಡಬೇಕು. ಕೆಲಸದಲ್ಲಿ ತಪ್ಪುಗಳಾದಂತೆ ನೋಡಿಕೊಳ್ಳಬೇಕು. ಯಾರಿಗಾದರೂ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳದಿದ್ದರೆ ಸಂಘದ ರಾಜ್ಯ ಘಟಕದ ಗಮನಕ್ಕೆ ತರಬೇಕು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಮಾವೇಶ ಏರ್ಪಡಿಸಬೇಕು’ ಎಂದರು.

ADVERTISEMENT

‘ಸೇವಾ ಭದ್ರತೆ, ಸಾಮಾನ್ಯ ನಿಯಮಾವಳಿ, ಭವಿಷ್ಯ ನಿಧಿ, ಆರೋಗ್ಯ ವಿಮೆ, ಸಂಬಳ ಸಹಿತ ರಜೆಗಳು, ವಾಸಕ್ಕೆ ಮನೆ, ನಿವೃತ್ತಿ ವೇತನ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಒಗ್ಗಟ್ಟಿನ ಹೋರಾಟ ನಡೆಸಲು ನೌಕರರು ಸಿದ್ಧರಾಗಬೇಕು’ ಎಂದು ಹೇಳಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಮುನಿಯಪ್ಪ, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಪಾಪಣ್ಣ, ಶಶಿಕಲಾ, ಕದಿರಪ್ಪ, ನವೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.