ADVERTISEMENT

ಚಿಕ್ಕಬಳ್ಳಾಪುರ: ಅಬಾವೃದ್ಧರ ಮನ ಸೆಳೆದ ಮೇಳ

ಜಿಲ್ಲಾ ಕ್ರೀಡಾಂಗಣದಲ್ಲಿ ಸಿರಿಧಾನ್ಯಗಳ ಲೋಕ ಅನಾವರಣ, ಜನಮನ ಆಕರ್ಷಿಸುತ್ತಿರುವ ಫಲ–ಪುಷ್ಪ ಲೋಕ, ಮುದಗೊಳಿಸಿದ ಪ್ರಾಣಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:39 IST
Last Updated 15 ಫೆಬ್ರುವರಿ 2020, 14:39 IST
ಮೇಳದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಅವರು ವಿವಿಧ ಮಳಿಗೆಗಳ ಬಗ್ಗೆ ಮಾಹಿತಿ ನೀಡಿದರು.
ಮೇಳದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಅವರು ವಿವಿಧ ಮಳಿಗೆಗಳ ಬಗ್ಗೆ ಮಾಹಿತಿ ನೀಡಿದರು.   

ಚಿಕ್ಕಬಳ್ಳಾಪುರ: ಒಂದೆಡೆ ಘಮಘಮಿಸುವ ಸಿರಿಧಾನ್ಯಗಳ ಖಾದ್ಯ ಪದಾರ್ಥಗಳ ಘಮಲು, ಇನ್ನೊಂದೆಡೆ ತರಹೇವಾರಿ ಕೃಷಿ ಪರಿಕರಗಳು, ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳಬೇಕು ಎನಿಸುವ ಕೃಷಿಗೆ ಬಳಸುತ್ತಿದ್ದ ಸಾಧನ ಸಲಕರಣೆಗಳು, ಮನಸ್ಸಿಗೆ ಮುದ ನೀಡುವ ಮೀನುಗಳು, ಮನಮೋಹಕ ಹೂವಿನ ಲೋಕ, ಗಮನ ಸೆಳೆಯುವ ಬೇಸಾಯದ ಪ್ರಾತ್ಯಕ್ಷಿಕೆಗಳು.. ಸುತ್ತು ಹಾಕಿದಷ್ಟು ಮುಗಿಯದ ಸಂತೆಯದು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಕೃಷಿ ಮೇಳ 2020’ ಸಿರಿಧಾನ್ಯಗಳ ಹಬ್ಬ ಹಾಗೂ ಫಲಪುಷ್ಪ ಪ್ರದರ್ಶನದ ಮೊದಲ ದಿನವಾದ ಶನಿವಾರ ಕಂಡುಬಂದ ಚಿತ್ರಣವಿದು.

ರಾಗಿ ಮುದ್ದೆ, ಗೋಧಿ ಚಪಾತಿ, ಅಕ್ಕಿ ಬಳಸಿ ಮಾಡಿದ ಬಗೆಬಗೆ ‘ಬಾತ್‌್’ಗಳನ್ನು ಮಾತ್ರ ತಿಂದು ಗೊತ್ತಿದ್ದ ಜನ ಕೃಷಿ ಮೇಳದಲ್ಲಿ ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು.. ಹೀಗೆ ಚೀಟಿಗಳನ್ನು ಅಂಟಿಸಿ ಇಟ್ಟಿದ್ದ ಕಿರುಧಾನ್ಯಗಳನ್ನು ಕುತೂಹಲದಿಂದ ನೋಡಲು ಮುಗಿಬಿದ್ದಿದ್ದರು. ನೋಡುವುದು ಮಾತ್ರವಲ್ಲದೆ ಅವುಗಳಿಂದ ಸಿದ್ಧಪಡಿಸಿದ ಚಕ್ಕುಲಿ, ಹಪ್ಪಳ, ಕೋಡುಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ, ಬರ್ಫಿ ಎಲ್ಲಾ ಬಗೆಯ ಸಿಹಿ ಮತ್ತು ಕುರುಕುರು ತಿಂಡಿಗಳನ್ನು ಚಪ್ಪರಿಸಿ, ಏನೋ ಹೊಸತು ಸವಿದ ಖುಷಿಯಲ್ಲಿದ್ದರು. ಅನೇಕರು ಕಿರುಧಾನ್ಯಗಳ ಹಿಟ್ಟು, ಅಕ್ಕಿಗಳು, ಸಾವಯವ ಉತ್ಪನ್ನಗಳನ್ನು ಖರೀದಿಸಿದರು.

ADVERTISEMENT

ಕೃಷಿ ಇಲಾಖೆ ವತಿಯಿಂದ ತೆರೆದ ಮಳಿಗೆಯಲ್ಲಿ ಜನರು ಸಾಂಪ್ರದಾಯಿಕ ಮತ್ತು ಪುರಾತನ ಕಾಲದ ಕೃಷಿ ಪರಿಕರಗಳನ್ನು ಸೋಜಿಗದಿಂದ ಕಣ್ತುಂಬಿಕೊಂಡು, ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿಟ್ಟುಕೊಳ್ಳುತ್ತಿದ್ದರು. ಕೃಷಿಗೆ ಪೂರಕವಾದ ತರಹೇವಾರಿ ಟ್ರ್ಯಾಕ್ಟರ್‌ಗಳು, ಕೃಷಿ ಪರಿಕರಗಳು, ಹನಿ, ತುಂತುರು ಮತ್ತು ಸೂಕ್ಷ್ಮ ನೀರಾವರಿ ಉಪಕರಣಗಳು, ಜಲಕೃಷಿಯಲ್ಲಿ ಮೇವಿನ ಬೆಳೆ ಪ್ರಾತ್ಯಕ್ಷಿಕೆಗಳು ಮೇಳಕ್ಕೆ ಬಂದವರ ಗಮನ ಸೆಳೆದವು.

ಇನ್ನೊಂದೆಡೆ, ಬರೀ ರಾಗಿ, ತರಕಾರಿ ಬೆಳೆಯುವ ರೈತರು ಮಳಿಗೆಯಿಂದ ಮಳಿಗೆ ಅಲೆದು ನವಣೆ, ಆರ್ಕ, ಸಾಮೆ, ಊದಲು ಬೀಜಗಳು ಎಲ್ಲಿ ಸಿಗುತ್ತವೆ. ಎಕರೆಗೆ ಎಷ್ಟು ಬೀಜ ಬೇಕು. ಸಾವಯವ ಗೊಬ್ಬರದ ವಿಶೇಷತೆ ಏನು? ಬೇಸಾಯ ಪದ್ಧತಿ ಹೇಗೆ? ಬೆಲೆ ಎಷ್ಟಿದೆ? ಮಾರುಕಟ್ಟೆ ಹೇಗೆ ಮಾಡುವುದು ಎಂದು ಕೌತುಕದಿಂದ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಮಸ್ತಕದೊಳಗೆ ತುಂಬಿಕೊಳ್ಳುತ್ತಿದ್ದರು.

ಇನ್ನು ಅನೇಕರು ಮೇಳದಲ್ಲಿ ಕಾಣಿಸಿದ ಹೊಸ ಬಗೆಯ ಕೃಷಿ ಯಂತ್ರೋಪಕರಣಗಳ ಬಗ್ಗೆ, ಸರ್ಕಾರದ ಸಹಾಯಧನ ಎಷ್ಟು? ನಾವು ಎಷ್ಟು ಪಾವತಿಸಬೇಕು? ಯಂತ್ರ ಖರೀದಿಸುವ ಪ್ರಕ್ರಿಯೆ ಹೇಗೆ..ಇತ್ಯಾದಿ ಮಾಹಿತಿ ಕಲೆ ಹಾಕುತ್ತಿದ್ದರು. ಸಂತೆಯ ಸ್ವರೂಪದ ಮೇಳದಲ್ಲಿ ಅಲ್ಲಲ್ಲಿ ಮೊಟ್ಟೆ ಕೋಳಿ ಸಾಕಣೆ ಪ್ರಾತ್ಯಕ್ಷಿಕೆಗಳ ಪ್ರದರ್ಶನ, ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದದ್ದು ಕಂಡುಬಂತು.

ಮೇಳದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆ ತೆರೆದಿವೆ. ಅವುಗಳಲ್ಲಿ ಆಯಾ ಇಲಾಖೆಗಳ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಜತೆಗೆ ವಿವಿಧ ಯೋಜನೆಗಳ ಪ್ರಾತ್ಯಕ್ಷಿಕೆಗಳು, ಸಸಿಗಳು, ಮೀನುಗಳು, ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು ಜನರಿಗೆ ಮನಮುಟ್ಟುವ ರೀತಿ ಮಾಹಿತಿ ಒದಗಿಸಲಾಗುತ್ತಿದೆ.

ರಾಜ್ಯಮಟ್ಟದ ತೊಗರಿ ಬೆಳೆಯುವ ಸ್ಪರ್ಧೆಯಲ್ಲಿ ಅತಿ ಹೆಚ್ಚು ಇಳುವರಿ ಪಡೆದು ಬಹುಮಾನ ಪಡೆದ ರೈತರಿಗೆ, ಆತ್ಮಯೋಜನೆ ಅಡಿ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ , ಸಮಗ್ರ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ರಂಗೋಲಿ, ಚಿತ್ರಕಲೆ, ಸಿರಿಧಾನ್ಯಗಳ ಅಡುಗೆ, ಶ್ವಾನ ಮತ್ತು ಜಾನುವಾರು ಸ್ಪರ್ಧೆಗಳಲ್ಲಿ ವಿಜೇತರಿಗೆ ಮೇಳದಲ್ಲಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸದಸ್ಯರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಬಂಕ್ ಮುನಿಯಪ್ಪ, ಕಮಲಮ್ಮ, ತಾಲ್ಲೂ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಲ್ಲಾಧಿಕಾರಿ ಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ, ಅಶ್ವತ್ಥನಾರಾಯಣಗೌಡ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ರೂಪಾ ಉಪಸ್ಥಿತರಿದ್ದರು.

ಪಟ್ಟಿ..

ಮೇಳದಲ್ಲಿ ಭಾನುವಾರ...
ಸಮಯ ಕಾರ್ಯಕ್ರಮ
ಬೆಳಿಗ್ಗೆ 10.30 ಸಿರಿಧಾನ್ಯಗಳ ಅಡುಗೆ ಸ್ಪರ್ಧೆ
ಬೆಳಿಗ್ಗೆ 10.30 ತೊಟ್ಲಿಗಾನಹಳ್ಳಿ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವಿನೋದ್‌ ಕುಮಾರ್‌ ಅವರಿಂದ ದೇಶಿಯ ತಳಿಗಳ ಬಗ್ಗೆ ಮಾಹಿತಿ ಹಂಚಿಕೆ
ಬೆಳಿಗ್ಗೆ 10.30 ಮಂಡಿಕಲ್ಲು ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪಿ.ಎ.ಮಂಜುನಾಥ್‌ ಅವರಿಂದ ಸಾವಯವ ಕೃಷಿಯಲ್ಲಿ ಪಶುಪಾಲನಾ ಪಾತ್ರ
ಬೆಳಿಗ್ಗೆ 10.30 ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಕೈತೋಟ ಮತ್ತು ವರ್ಟಿಕಲ್ ಗಾರ್ಡನಿಂಗ್‌ ಕುರಿತು ಮಾಹಿತಿ ವಿನಿಮಯ
ಮಧ್ಯಾಹ್ನ 1.30 ಜನಪದ ಜಾತ್ರೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು
ಮಧ್ಯಾಹ್ನ 3 ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ
ಸಂಜೆ 5 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.