ಚಿಂತಾಮಣಿ: ವಿಧಾನಸಭೆಯಲ್ಲಿ ಪ್ರಸ್ತಾಪವಾಗಿರುವ ಹನಿಟ್ರ್ಯಾಪ್ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ ನಂತರ ಮುಕ್ತಾಯವಾಗಬೇಕಿತ್ತು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಭಾನುವಾರ ತಾಲ್ಲೂಕಿನ ಬೂರಗಮಾಕಲಹಳ್ಳಿಯಲ್ಲಿ ನಡೆದ ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘದ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಭರವಸೆ ನೀಡಿದ ನಂತರವೂ ವಿಧಾನಸಭೆ ಸ್ಪೀಕರ್ ಪೀಠದ ಮೇಲೇರಿ ಅನಾಗರಿಕ ರೀತಿಯಲ್ಲಿ ಕಾಗದಪತ್ರಗಳನ್ನು ಚೂರುಮಾಡಿ ಅಧ್ಯಕ್ಷ ಪೀಠದ ಮೇಲೆ ಎಸೆದಿರುವುದು ಸರಿಯಲ್ಲ. 18 ಶಾಸಕರ ಮೇಲೆ ಕ್ರಮಕೈಗೊಂಡಿರುವುದು ಸರಿಯಾಗಿದೆ. ತನಿಖೆಯವರೆಗೂ ಕಾದು ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಬಹುದಾಗಿತ್ತು. ವಿಧಾನಸಭೆಯಲ್ಲೂ ಕಾನೂನುಗಳಿವೆ, ನೀತಿ ನಿಯಮಗಳಿವೆ. ಅದನ್ನು ಕಡೆಗಣಿಸಿ ನಡೆದುಕೊಳ್ಳುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ 4ರಷ್ಟು ಮೀಸಲಾತಿ ನೀಡಿರುವುದರಲ್ಲೂ ತಪ್ಪು ಕಾಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದೆ. ತೀರ್ಮಾನ ಕೈಗೊಂಡಿದೆ. ವಿರೋಧವಿದ್ದರೆ ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕು. ವಿರೋಧವನ್ನು ವ್ಯಕ್ತಪಡಿಸಲು ಹಾಗೂ ಹೋರಾಟ ನಡೆಸಲು ಹಲವಾರು ಮಾರ್ಗಗಳಿವೆ. ಸಭಾಧ್ಯಕ್ಷರ ಪೀಠದ ಬಗ್ಗೆ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ ಎಂದು ಹೇಳಿದರು.
ಅಮಾನತು ಆಗಿರುವ ಶಾಸಕರು ಮನವಿ ಮಾಡಿದರೆ ತೆರವುಗೊಳಿಸುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಸ್ಪೀಕರ್ ಅವಕಾಶ ನೀಡಿದ್ದಾರೆ. ಕರ್ನಾಟಕದ ವಿಧಾನಸಭೆಯ ಘನತೆ, ಗೌರವ ಉಳಿಸುವುದು ಎಲ್ಲ ಪಕ್ಷಗಳ ನಾಯಕರ ಜವಾಬ್ದಾರಿ. ಕರ್ನಾಟಕದ ರಾಜಕಾರಣಿಗಳು ರಾಷ್ಟ್ರದಲ್ಲಿ ಮಾದರಿಯಾಗಿ ನಡೆದುಕೊಂಡಿದ್ದಾರೆ. ಅದನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.