ADVERTISEMENT

ಚಿಕ್ಕಬಳ್ಳಾಪುರ: ಪತ್ರಿಕೆಯ ಪ್ರೀತಿ; ಊರಿಗೆ ಬಂತು ಬಸ್ಸು

ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿಯ ನಂಜುಂಡಸ್ವಾಮಿ ಅವರ ಕಾರ್ಯ

ಪ್ರಜಾವಾಣಿ ವಿಶೇಷ
Published 14 ಮಾರ್ಚ್ 2021, 4:27 IST
Last Updated 14 ಮಾರ್ಚ್ 2021, 4:27 IST
ಬಿ.ಎನ್. ಶೋಭಾ
ಬಿ.ಎನ್. ಶೋಭಾ   

ಚಿಕ್ಕಬಳ್ಳಾಪುರ: ಅದು 1970–75ರ ಅವಧಿ. ನಾನಾಗ ಪ್ರಾಥಮಿಕ ಶಾಲೆ ವಿದ್ಯಾರ್ಥಿ. ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ನಮ್ಮೂರು. ಅಂದು 50 ಮನೆಗಳ ಸಣ್ಣ ಗ್ರಾಮ. ನನ್ನ ತಂದೆ ಜಿ.ವಿ. ನಂಜುಂಡಸ್ವಾಮಿ. ಅಪ್ಪನಿಗೆ ಪತ್ರಿಕೆ ಓದುವ ಗೀಳು ಅಪಾರ. ಪತ್ರಿಕೆ ಓದು ವುದು ಅವರ ಪಾಲಿಗೆ ಸಂಭ್ರಮ ಸಹ.

ನಮ್ಮ ಸೋದರತ್ತೆ (ಅಪ್ಪನ ಅಕ್ಕ)‌ಯನ್ನು ಮದುವೆ ಮಾಡಿಕೊಟ್ಟಿದ್ದು ಬೆಂಗಳೂರಿಗೆ. ಅಪ್ಪ ಆಗಾಗ್ಗೆ ಬೆಂಗಳೂರಿಗೆ ಹೋಗುತ್ತಿದ್ದರು. ಅಲ್ಲಿಂದ ಪತ್ರಿಕೆಗಳನ್ನು ತಂದು ನಿತ್ಯವೂ ಹರಡಿಕೊಂಡು ಓದುತ್ತಿದ್ದರು. ಮನೆಗೆ, ನಮ್ಮೂರಿಗೆ ಪತ್ರಿಕೆ ತರಿಸಬೇಕು ಎನ್ನುವುದು ಅವರ ಆಸೆ. ಆಗ ಚಿಕ್ಕಬಳ್ಳಾಪುರ (ಇಂದು ಜಿಲ್ಲಾ ಕೇಂದ್ರ)ದಿಂದ ಮನೆಗೆ ಪತ್ರಿಕೆ ತರಿಸಬೇಕಿತ್ತು. ನಮ್ಮ ಊರಿಗೆ ಬಸ್ ಸಹ ಬರುತ್ತಿರಲಿಲ್ಲ. ಗ್ರಾಮಕ್ಕೆ ಬಸ್ ಬಂದರೆ ದಿನವೂ ಪತ್ರಿಕೆ ಊರಿಗೆ ಬರುತ್ತದೆ, ಓದಬಹುದು ಎನಿಸಿತು ಅಪ್ಪನಿಗೆ.

ನಮ್ಮ ಅಮ್ಮ ಲೀಲಾ ಅವರಿಗೂ ಓದಿನಲ್ಲಿ ಅಭಿರುಚಿ. ಮನೆಯಲ್ಲಿ ಪುಸ್ತಕ, ಪತ್ರಿಕೆಗಳು ಇರಬೇಕು ಎನ್ನುವುದು ಅವರ ನಿಲುವು.

ADVERTISEMENT

ಆ ದಿನಗಳಲ್ಲಿ ಬೆಂಗಳೂರನ್ನು ಮಧ್ಯಾಹ್ನ 2.30ಕ್ಕೆ ಬಿಡುತ್ತಿದ್ದ ಸರ್ಕಾರಿ ಬಸ್, ರಾತ್ರಿ ಕೊತ್ತಕೋಟೆಯಲ್ಲಿ ನಿಲುಗಡೆ ಆಗುತ್ತಿತ್ತು. ಸಂಜೆ ಬೀಚಗಾನಹಳ್ಳಿ ಕ್ರಾಸ್‌ನಲ್ಲಿ ಕೆಲ ನಿಮಿಷ ಬಸ್ ನಿಲ್ಲಿಸುತ್ತಿದ್ದರು. ಬೀಚಗಾನಹಳ್ಳಿ ಕ್ರಾಸ್‌ನಿಂದ ಊರು ಒಂದೂವರೆ ಕಿ.ಮೀ ದೂರ. ಆ ಬಸ್ ಅನ್ನು ಗ್ರಾಮಕ್ಕೆ ಬರುವಂತೆ ಮಾಡಬೇಕು. ಆ ಮೂಲಕ ಪತ್ರಿಕೆಯೂ ಊರಿಗೆ ಬರುತ್ತದೆ ಎಂದು ಚಿಕ್ಕಬಳ್ಳಾಪುರಕ್ಕೆ ತೆರಳಿ ಅಧಿಕಾರಿಗಳಿಗೆ ಬೀಚಗಾನಹಳ್ಳಿಗೂ ಬಸ್ ಟರ್ನ್ ಮಾಡುವಂತೆ ಮನವಿ ಮಾಡಿದರು. ಪದೇ ಪದೇ ಮನವಿಯ ಫಲವಾಗಿ ಬಸ್ ಗ್ರಾಮಕ್ಕೆ ಬಂದಿತು. ಅಂದಿನಿಂದ ಜನರ ಬಾಯಲ್ಲಿ ಅದು ‘ಟರ್ನಿಂಗ್ ಬಸ್’ಎಂದೇ ಪ್ರಸಿದ್ಧವಾಯಿತು.

ಸಂಜೆ ಊರಿಗೆ ಬರುತ್ತಿದ್ದ ಈ ಬಸ್‌ಗೆ ಚಿಕ್ಕಬಳ್ಳಾಪುರದಲ್ಲಿ ಪತ್ರಿಕೆ ಕೊಡುವವರು ಯಾರೂ ಇರಲಿಲ್ಲ. ಬಸ್ ಗ್ರಾಮಕ್ಕೆ ಬಂದಿತು. ಆದರೆ ಪತ್ರಿಕೆ ತರಿಸುವ ಆಸೆ ಮಾತ್ರ ಈಡೇರಲಿಲ್ಲ.

ಸ್ವಲ್ಪದಿನ ಹೀಗೆ ಕಳೆದು ಹೋದವು. ಗುಡಿಬಂಡೆಯ ನಾರಾಯಣರಾವ್ ಎಂಬುವವರು ಪತ್ರಿಕೆಗಳನ್ನು ತರಿಸಲು ಆರಂಭಿಸಿದರು. ಕೊತ್ತಕೋಟೆಯಲ್ಲಿ ನಿಲುಗಡೆ ಆಗುತ್ತಿದ್ದ ಟರ್ನಿಂಗ್ ಬಸ್ ಮರುದಿನ ನಮ್ಮ ಗ್ರಾಮಕ್ಕೆ ಬರುತ್ತಿತ್ತು. ಈ ಟರ್ನಿಂಗ್ ಬಸ್‌ ಮೂಲಕ ನಾರಾಯಣರಾವ್ ಪತ್ರಿಕೆ ತಲುಪಿಸುತ್ತಿದ್ದರು. ಬೆಳಿಗ್ಗೆ 8.30ಕ್ಕೆ ಪತ್ರಿಕೆ ಮನೆಗೆ ಬರುತ್ತಿತ್ತು.

ನಾರಾಯಣರಾವ್ ಗುಡಿಬಂಡೆಯಿಂದ ಬಸ್‌ನಲ್ಲಿ ‘ಪ್ರಜಾವಾಣಿ’ ಪತ್ರಿಕೆ ಕಳುಹಿಸುತ್ತಿದ್ದರು. ಊರಿಗೆ ಬಸ್ ಬಂದಿದ್ದೇ ತಡ, ನಮ್ಮ ಮನೆಯಲ್ಲಷ್ಟೇ ಅಲ್ಲ ಗ್ರಾಮದ 10ಕ್ಕೂ ಹೆಚ್ಚು ಮನೆಗಳಲ್ಲಿ ‘ಪ್ರಜಾವಾಣಿ’ ತರಿಸುವುದನ್ನು ಆರಂಭಿಸಿದರು. ನಮ್ಮ ಅಜ್ಜ ಬಸಪ್ಪ ಅವರಿಗೆ ಇಂಗ್ಲಿಷ್ ಪತ್ರಿಕೆ ಓದುವ ಅಭಿರುಚಿ. ‘ಡೆಕ್ಕನ್ ಹೆರಾಲ್ಡ್’ ಸಹ ಮನೆಗೆ ಬಂದಿತು.

ನಾವು ಸಂಜೆ ಶಾಲೆಯಿಂದ ಬಂದ ನಂತರ ‘ಪ್ರಜಾವಾಣಿ’ ಓದುತ್ತಿದ್ದೆವು. ನಮ್ಮ ಮನೆಯಲ್ಲಿ ಅಪ್ಪ ಓದಿದ ನಂತರ ಆ ಪತ್ರಿಕೆ ಬೇರೆ ಬೇರೆ ಮನೆಗಳ ಪಡಸಾಲೆ ಎಡತಾಕಿ ರಾತ್ರಿ ಮನೆ ಅಂಗಳ ಸೇರುತ್ತಿತ್ತು. ಸಂಜೆ ಮನೆ ಬಳಿಯ ಜಗಲಿ ಕಟ್ಟೆಯಲ್ಲಿ ಹಿರಿಯರೆಲ್ಲ ಸೇರಿದಾಗ ‘ಪ್ರಜಾವಾಣಿ’ಯಲ್ಲಿ ಬಂದ ಸುದ್ದಿಗಳದ್ದೇ ಚರ್ಚೆ. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರ ಹೆಸರನ್ನು ಕೇಳಿದ್ದು ಆಗಲೇ.

ನಾವು ಬೌದ್ಧಿಕವಾಗಿ ವಿಸ್ತಾರಗೊಳ್ಳಲು, ಆಲೋಚನಾ ಕ್ರಮಗಳು ವಿಸ್ತರಿಸಲು ಬಾಲ್ಯದಿಂದಲೂ ನೆರವಾದುದು ‘ಪ್ರಜಾವಾಣಿ’. ಅಪ್ಪ ಅಂದು ಪತ್ರಿಕೆ ತರಿಸಲು ಮಾಡಿದ ಪ್ರಯತ್ನಗಳು, ಪಡಿಪಾಟಲು ಈಗ ನೆನಪಾದರೆ ಅಚ್ಚರಿ ಆಗುತ್ತದೆ. ಪತ್ರಿಕೆ ಓದಿನ ಸುಖ ಹಿರಿಯರನ್ನು ಎಷ್ಟರ ಮಟ್ಟಿಗೆ ತಟ್ಟಿತ್ತು ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.