ADVERTISEMENT

ಚಿಕ್ಕಬಳ್ಳಾಪುರ | ತಾಯಿಯೊಂದಿಗೆ ಸಸಿ: ಆಮೆ ನಡಿಗೆ

ಜಿಲ್ಲೆಯಲ್ಲಿ 1,41,260 ಸಸಿಗಳನ್ನು ನೆಡುವ ಗುರಿ ಆದರೆ ನೆಟ್ಟಿರುವುದು 2,265 ಸಸಿ

ಡಿ.ಎಂ.ಕುರ್ಕೆ ಪ್ರಶಾಂತ
Published 22 ಆಗಸ್ಟ್ 2025, 6:51 IST
Last Updated 22 ಆಗಸ್ಟ್ 2025, 6:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ‘ತಾಯಿಯೊಂದಿಗೆ ಸಸಿ’ ಕಾರ್ಯಕ್ರಮದ ಸಾಧನೆ ತೀರಾ ಕಳಪೆಯಾಗಿದೆ. ಯೋಜನೆಯ ನಿಗದಿತ ಗುರಿ ಮತ್ತು ಈಗಿನ ಸಾಧನೆಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ. 

ಮಿಷನ್ ಲೈಫ್‌ ಕಾರ್ಯಕ್ರಮದಡಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ತಮ್ಮ ತಾಯಿಯೊಂದಿಗೆ ಒಂದು ಸಸಿ ನೆಟ್ಟು ಆ ಭಾವಚಿತ್ರವನ್ನು ಮಿಷನ್ ಲೈಫ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ಬಗ್ಗೆ ಶಿಕ್ಷಣ ಇಲಾಖೆಯು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಸಹ ನೀಡಿತ್ತು.  

ADVERTISEMENT

ಆದರೆ ಈ ಯೋಜನೆಗೆ ಜಿಲ್ಲೆಯಲ್ಲಿ ಹಿನ್ನಡೆ ಆಗಿದೆ. ಶೇ 1.60ರಷ್ಟು ಗುರಿ ಸಾಧಿಸಿ ಫೋಟೊಗಳನ್ನು ಅ‍ಪ್‌ಲೋಡ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1,41,260 ಸಸಿಗಳನ್ನು ನೆಡುವ ಗುರಿ ಶಿಕ್ಷಣ ಇಲಾಖೆ ನೀಡಿದೆ. ಆದರೆ ಆ.19ಕ್ಕೆ ಕೇವಲ 2,265 ಸಸಿಗಳನ್ನು ಮಾತ್ರ ನೆಟ್ಟ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿದೆ. ಒಟ್ಟಾರೆ ಸಾಧನೆ ಶೇ 1.60 ಮಾತ್ರ.

ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಈ ಬಗ್ಗೆ ಪ್ರೇರೇಪಿಸಬೇಕು. ತಾಯಿಯೊಂದಿಗೆ ಒಂದು ಸಸಿ ನೆಟ್ಟು ಅದರ ಭಾವಚಿತ್ರವನ್ನು ತುರ್ತಾಗಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ನಿಗದಿತ ಗುರಿ ಸಾಧಿಸಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2025-26 ನೇ ಶಾಲೆಗಳಲ್ಲಿ ಮಿಷನ್ ಲೈಫ್ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು ತಾಯಿಯೊಂದಿಗೆ ಸಸಿ (Plant for Mother) (ತಾಯಿಗಾಗಿ ಗಿಡ) ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ತಾಯಿಯೊಂದಿಗೆ ಸಸಿ ನೆಟ್ಟು ಸೆಲ್ಪಿ ಭಾವಚಿತ್ರ ತೆಗೆದು ಶಾಲಾ ಡೆೃಸ್ ಮತ್ತು ವಿದ್ಯಾರ್ಥಿ ಹೆಸರು, ತಂದೆ, ತಾಯಿ ಹೆಸರು ನಮೂದಿಸಿ ಭಾವಚಿತ್ರ ಅಪ್‌ಲೋಡ್ ಮಾಡಿದರೆ ಪ್ರಮಾಣ ಪತ್ರ ಪಡೆಯಬಹುದು. ಶಾಲೆ ಆವರಣದಲ್ಲಿಯೇ ಗಿಡನೆಡಬೇಕು ಎಂದೇನೂ ಇಲ್ಲ. ವಿದ್ಯಾರ್ಥಿ ತಮ್ಮ ಪರಿಸರ, ತೋಟ, ಹೊಲಗಳಲ್ಲಿಯೂ ಗಿಡಗಳನ್ನು ನೆಡಬಹುದು. ಈ ಕಾರ್ಯಕ್ರಮದಲ್ಲಿ  ಕಡ್ಡಾಯವಾಗಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆದೇಶಿಸಿದ್ದಾರೆ.

ಮಿಷನ್ ಲೈಫ್ ಕಾರ್ಯಕ್ರಮವು ಹವಾಮಾನ ಬದಲಾವಣೆಯಿಂದಾಗುವ ವಿಪತ್ತುಗಳಿಂದ ಭೂಮಿಯನ್ನು ರಕ್ಷಿಸುವ ಗುರಿ ಹೊಂದಿದೆ. 2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಕೇವಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟನಿಯೊ ಗುಟೆರಸ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಶಾಲೆಗಳಲ್ಲಿ ಮಿಷನ್ ಲೈಫ್ ಎಕೊ ಕ್ಲಬ್ ರಚಿಸಿ, ಅವುಗಳ ಮೂಲಕ ಜಿಲ್ಲೆಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಶಾಲೆಗೂ ಗಿಡ ನೆಡುವ ಗುರಿ ನೀಡಿ, ವಿಶೇಷ ಮುತುವರ್ಜಿವಹಿಸುವಂತೆ ತಿಳಿಸಲಾಗಿತ್ತು. ಶಿಕ್ಷಕರು ಮತ್ತು ಮಕ್ಕಳ ಪೋಷಕರು ಗಿಡಗಳನ್ನು ತಂದು ನಾಟಿ ಮಾಡುವ ಹೊಣೆ ನಿರ್ವಹಿಸಬೇಕು ಆದರೆ ಆ ಕೆಲಸ ಆಗುತ್ತಿಲ್ಲ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಪ್ರತಿ ವಿದ್ಯಾರ್ಥಿ ಅಮ್ಮನೊಂದಿಗೆ ಗಿಡ ನೆಡುವ ಚಿತ್ರ ತೆಗೆದು ಇಲಾಖೆ ನೀಡಿರುವ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಆಯಾ ತರಗತಿಯ ಶಿಕ್ಷಕರು ತಮ್ಮ ತರಗತಿಯಲ್ಲಿ ಇರುವ ಮಕ್ಕಳ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಹೊಣೆ ನಿರ್ವಹಿಸಬೇಕು. ಆದರೆ ಜಿಲ್ಲೆಯಲ್ಲಿ ಶಿಕ್ಷಕರು ಈ ವಿಚಾರವಾಗಿ ಮಕ್ಕಳನ್ನು ಪ್ರೇರೇಪಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎನ್ನುವುದು ಜಿಲ್ಲೆಯಲ್ಲಿ ನೆಟ್ಟಿರುವ ಗಿಡಗಳಿಂದ ತಿಳಿಯುತ್ತದೆ.

ಯೋಜನಾ ನಿರ್ದೇಶಕರ ಆಕ್ಷೇಪಣೆ
ಈ ಸಂಬಂಧ ಇತ್ತೀಚೆಗೆ ನಡೆದ ಜೂಮ್ ಸಭೆಯಲ್ಲಿ ಶಿಕ್ಷಣ ಇಲಾಖೆ ರಾಜ್ಯ ಯೋಜನಾ ನಿರ್ದೇಶಕರು ಜಿಲ್ಲೆಯ ಈ ಕಾರ್ಯಚಟುವಟಿಗಳ ಕಳಪೆ ಸಾಧನೆಯ ಬಗ್ಗೆ ತೀವ್ರ ಆಕ್ಷೇಪಣೆ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಆಕ್ಷೇಪಣೆ ಹಿನ್ನೆಲೆಯಲ್ಲಿ ಡಿಡಿಪಿಐ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗೆ ಈ ಬಗ್ಗೆ ಪತ್ರ ಸಹ ಬರೆದಿದ್ದಾರೆ.
‘ಅರಣ್ಯ ಇಲಾಖೆ ಸಹಯೋಗ ಅಗತ್ಯ’
ಈ ಕಾರ್ಯಕ್ರಮ ಯಶಸ್ಸು ಆಗಬೇಕು ಎಂದರೆ ಅರಣ್ಯ ಇಲಾಖೆಯ ಸಹಕಾರ ಮತ್ತು ಸಹಯೋಗ ಅತ್ಯಗತ್ಯ. ಅರಣ್ಯ ಇಲಾಖೆಯು ಗಿಡಗಳನ್ನು ನೀಡಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.